ಉಡುಪಿ, ಜೂ. 21 (DaijiworldNews/AA): ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ) 2003 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ, ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ವಿಶೇಷ ತಂಡವು ಇತ್ತೀಚೆಗೆ ಕಾಪು ತಾಲೂಕಿನಾದ್ಯಂತ ದಾಳಿ ನಡೆಸಿದೆ.

ಅಧಿಕಾರಿಗಳು ಕಾಪು ತಾಲೂಕಿನ ಪಡುಬಿದ್ರಿ ಪಟ್ಟಣ ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳು, ಹೋಟೆಲ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 44 ಪ್ರಕರಣಗಳನ್ನು ದಾಖಲಿಸಲಾಗಿದ್ದು, 17,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ.
ಈ ದಾಳಿಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ಜಾದರ್ ಮತ್ತು ಜಗದೀಶ್ ರಾವ್, ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ತಾಲೂಕು ದೈಹಿಕ ಪರೀಕ್ಷಣಾಧಿಕಾರಿ ರವೀಂದ್ರ ನಾಯ್ಕ್, ಪಡುಬಿದ್ರಿ ಪೋಲಿಸ್ ಠಾಣೆಯ ಶ್ರೀಧರ್ ಆರ್., ಕಾರ್ಮಿಕ ನಿರೀಕ್ಷಕ ಎನ್.ಪಿ.ಎಲ್ ಸಂಜಯ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ ಮಂಜುಳಾ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಡಿ. ಭಂಡಾರಿ ಭಾಗವಹಿಸಿದ್ದರು.