ಮಂಗಳೂರು, ಜೂ. 21 (DaijiworldNews/AA): ಎಕ್ಸ್ಪರ್ಟ್ ಪ.ಪೂ ಕಾಲೇಜಿನಲ್ಲಿ ವಿನೂತನ ಪ್ರಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯ ಸಮಾಗಮ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್ಬೈಲ್ನಲ್ಲಿ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯನ್ನು ಜೂನ್ 21 ರಂದು ಸಂಭ್ರಮದಿಂದ ಆಚರಿಸಲಾಗಿತ್ತು.







ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು, "ಯೋಗವು ನಮ್ಮ ಶರೀರ- ಮನಸ್ಸುಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಜನೆಯ ಜೊತೆಗೆ ಪ್ರತಿನಿತ್ಯಯೋಗವನ್ನೂ ಅಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ" ಎಂದರು.
ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯುವ ಸಿತಾರ್ ಕಲಾವಿದೆ ಅನಿಕಾ ಸೂರಿ ಅವರು, ಸಿತಾರ್ ವಾದನವನ್ನು ನುಡಿಸುವ ಮೂಲಕ ಯೋಗದೊಂದಿಗೆ ವಿಶ್ವ ಸಂಗೀತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು. ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದೊಂದಿಗೆ ಸಿತಾರ್ ವಾದನ ನುಡಿಸುವ ಮೂಲಕ ಹಲವು ರಾಗಗಳನ್ನು ಪ್ರಸ್ತುತ ಪಡಿಸಿದರು. ಯೋಗ ಮತ್ತು ಸಂಗೀತ ಸಮ್ಮಿಲನದೊಂದಿಗೆ ವಿದ್ಯಾರ್ಥಿಗಳ ಯೋಗ ಪ್ರಾತ್ಯಕ್ಷಿಕೆ ಸುಂದರ ಕ್ಷಣವನ್ನು ನಿರ್ಮಿಸಿತು.
ವೇದಿಕೆಯಲ್ಲಿ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಸಂಗೀತದೊಂದಿಗೆ ಯೋಗವನ್ನು ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕಿ ಮತ್ತು ಸಂಸ್ಕೃತ ಉಪನ್ಯಾಸಕಿ ಅಪೇಕ್ಷಾ, ಕನ್ನಡ ವಿಭಾಗದ ಉಪನ್ಯಾಸಕ ಕರುಣಾಕರ ಬಳ್ಕೂರು ಸೇರಿದಂತೆ ಇತರ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.