ಮಂಗಳೂರು,ಜೂ. 20 (DaijiworldNews/AK) :ಮಂಗಳೂರು ನಗರದ ಮುಂಬರುವ ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಓಡಾಟಕ್ಕೆ ಆದ್ಯತೆ ನೀಡುವಂತೆ ಕೋರಿ ದಕ್ಷಿಣ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ದೇಶದಲ್ಲಿ ಪಾದಚಾರಿಗಳ ಹಕ್ಕುಗಳ ಕುರಿತು ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿ ಸಂಸದರು ಈ ಪತ್ರ ಬರೆದಿದ್ದು, ಅದರ ಪ್ರತಿಯನ್ನು ನಗರಾಭಿವೃದ್ಧಿ ಸಚಿವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(MUDA) ಆಯುಕ್ತರಿಗೂ ಕಳುಹಿಸಿದ್ದಾರೆ.
ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಗುರುತಿಸಲಾಗಿದ್ದು, ಪಾದಚಾರಿ ಮೂಲಸೌಕರ್ಯ ಒದಗಿಸುವುದು ಮತ್ತು ನಿರ್ವಹಿಸುವುದು ಸ್ಥಳೀಯ ಸಂಸ್ಥೆಗಳು ಹಾಗೂ ಯೋಜನಾ ಪ್ರಾಧಿಕಾರಗಳ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಈ ಹಿನ್ನಲೆಯಲ್ಲಿ ಸಿಎಂಗೆ ಪತ್ರ ಬರೆದಿರುವ ಕ್ಯಾ.ಚೌಟ ಅವರು, ಭವಿಷ್ಯದ ಮಂಗಳೂರಿನ ಹಲವು ದಶಕಗಳ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವ ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಸಂಚಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನಗರದಲ್ಲಿ ದಿನನಿತ್ಯದ ಸಂಚಾರಕ್ಕಾಗಿ ನಡಿಗೆಯನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ನಿತ್ಯ ಪ್ರಯಾಣಿಕರು ಮತ್ತು ಕಾರ್ಮಿಕರ ಸಂಖ್ಯೆ ದೊಡ್ಡದಾಗಿದೆ. ನಗರವು ವಿಸ್ತರಣೆಗೊಳ್ಳುತ್ತಾ ವಾಹನ ದಟ್ಟಣೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸುರಕ್ಷಿತ ಹಾಗೂ ಪಾದಚಾರಿ ಸ್ನೇಹಿ ಫುಟ್ಪಾತ್ಗಳ ನಿರ್ಮಾಣದ ತೀರಾ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಂಗಳೂರು ನಗರಕ್ಕೆ ’ಸಮಗ್ರ ಪಾದಚಾರಿ ಸಂಚಾರ ವ್ಯವಸ್ಥೆ’ಯನ್ನು ರೂಪಿಸುವಂತೆ ಕ್ಯಾ.ಚೌಟ ಒತ್ತಾಯಿಸಿದ್ದು, ಅಡೆತಡೆ ರಹಿತ ಫುಟ್ಪಾತ್ಗಳು, ಶಾಲೆ-ಕಾಲೇಜು, ಆಸ್ಪತ್ರೆ, ಮಾರುಕಟ್ಟೆ ಹಾಗೂ ಸಾರಿಗೆ ಕೇಂದ್ರಗಳ ಬಳಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ, ವಿಶೇಷಚೇತನರಿಗೆ ಅನುಕೂಲವಾಗುವ ಮೂಲಸೌಕರ್ಯ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದಿಗೆ ಸಂಪರ್ಕ ಹಾಗೂ ಫುಟ್ಪಾತ್ಗಳ ಮೇಲಿನ ಅತಿಕ್ರಮಣ ಮತ್ತು ಅನಧಿಕೃತ ವಾಹನ ನಿಲುಗಡೆ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದಲ್ಲದೆ, ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಮೊದಲು ಮಂಗಳೂರು ನಗರದ ಸಮಗ್ರ ‘ಪಾದಚಾರಿ ಮೂಲಸೌಕರ್ಯ ಮತ್ತು ವಾಕಬಿಲಿಟಿ (Walkability) ಆಡಿಟ್’ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದರಿಂದ ಪಾದಚಾರಿ ಸಂಚಾರದ ಸುರಕ್ಷತೆಯಲ್ಲಿರುವ ಲೋಪದೋಷಗಳನ್ನು ಗುರುತಿಸಿ, ನಗರ ಯೋಜನೆಯಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಅಳವಡಿಸಬಹುದಾಗಿದೆ. ಮಂಗಳೂರಿನಲ್ಲಿ ಬೆಳೆದು, ವಿದ್ಯಾರ್ಥಿ ಹಾಗೂ ನಾಗರಿಕನಾಗಿ ನಗರದ ಅನುಭವ ಹೊಂದಿರುವ ತಾವು, ಪಾದಚಾರಿಗಳು ಎದುರಿಸುತ್ತಿರುವ ಸವಾಲುಗಳನ್ನು ಪ್ರತ್ಯಕ್ಷವಾಗಿ ಅರ್ಥಮಾಡಿಕೊಂಡು ಪರಿಣಾಮಕಾರಿ ಯೋಜನೆ ರೂಪಿಸಲು ಜಿಲ್ಲಾಡಳಿತ, MUDA ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
"ಮಂಗಳೂರು ಐತಿಹಾಸಿಕವಾಗಿ ಒಂದು ಅಚ್ಚುಕಟ್ಟಾದ ಮತ್ತು ಪಾದಚಾರಿ ಸ್ನೇಹಿ ನಗರವಾಗಿ ಬೆಳೆದಿದೆ. ಇದು ಪ್ರಮುಖ ನಗರ ಕೇಂದ್ರವಾಗಿ ಬೆಳೆಯುತ್ತಿರುವಾಗ, ಈ ವಿಶಿಷ್ಟ ಗುಣವನ್ನು ಉಳಿಸಿಕೊಂಡು ಬಲಪಡಿಸುವುದು ರಸ್ತೆ ಸುರಕ್ಷತೆ, ಸಾರ್ವಜನಿಕ ಆರೋಗ್ಯ, ಪರಿಸರ ಸುಸ್ಥಿರತೆ ಮತ್ತು ಇಲ್ಲಿನ ನಿವಾಸಿಗಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಗಮನಾರ್ಹ ಕೊಡುಗೆ ನೀಡಲಿದೆ" ಎಂದು ಕ್ಯಾ. ಬ್ರಿಜೇಶ್ ಚೌಟ ಪತ್ರದಲ್ಲಿ ಒತ್ತಾಯಿಸಿದ್ದಾರೆ.