ಮಂಗಳೂರು, ಜೂ. 12 (DaijiworldNews/AA): ನಗರದ ಪಡೀಲ್ ಗ್ರಾಮದ ಜೋಡುಕಟ್ಟೆ ಮರೋಳಿ ಬಳಿ ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿಯ ಶಶಾಂಕ ಪುದುವೆಟ್ಟು, ಮಂಜೇಶ್ವರದ ಅಬ್ದುಲ್ ಖಾದರ್ ಮತ್ತು ಅತ್ತಾವರದ ಪ್ರಭಾಚಂದ್ರ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ವೇಳೆ, ಆರೋಪಿಗಳಿಂದ ಎರಡು ಕಾರುಗಳು ಮತ್ತು ಒಟ್ಟು 42.700 ಕೆಜಿ ತೂಕದ ಎರಡು ಆನೆದಂತಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಐಪಿಎಸ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಜಿ.ಆರ್. ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಸಿಬ್ಬಂದಿಗಳಾದ ಜಯರಾಮ ಕೆ.ಟಿ., ಬಾಲಕೃಷ್ಣ ಕೆ.ಎಂ., ತಾರಾನಾಥ್ ಎಸ್. ಮತ್ತು ಅಬ್ದುಲ್ ರೌಫ್ ಪಾಲ್ಗೊಂಡಿದ್ದರು.