ಉಡುಪಿ, ಜೂ. 12 (DaijiworldNews/TA): ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿ, ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ದೇವಿಯ ದರ್ಶನ ಪಡೆದರು.

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದ ವಿಜಯ್, ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿದರು. ಅಲ್ಲದೆ, 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ಸಿಎಂ ವಿಜಯ್ ಅವರನ್ನು ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಅರ್ಚಕ ವೃಂದ ಮಂತ್ರಘೋಷದೊಂದಿಗೆ ದೇವಾಲಯದೊಳಗೆ ಬರಮಾಡಿಕೊಂಡಿತು.
ಶಲ್ಯ ಧರಿಸಿ ಆಗಮಿಸಿದ ವಿಜಯ್, ದೇವಸ್ಥಾನದ ಸಂಪ್ರದಾಯ ಮತ್ತು ಶಿಷ್ಟಾಚಾರವನ್ನು ಪಾಲಿಸಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಗಿದ್ದು, ಸಿಎಂ ವಿಜಯ್ ಕೂಡ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಸಂಪ್ರದಾಯದಂತೆ ದೇವಿಗೆ ನಿತ್ಯ ನಡೆಯುವ ಪೂಜೆ ಹಾಗೂ ದೀಪಾರಾಧನೆ ನಡೆಸಲಾಯಿತು. ಯಾವುದೇ ವಿಶೇಷ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.
ಪೂಜೆ ಬಳಿಕ ಅರ್ಚಕರು ಸಿಎಂ ವಿಜಯ್ ಅವರಿಗೆ ರಕ್ಷಾ ದಾರ ಕಟ್ಟಿ ಆಶೀರ್ವದಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದ ವಿಜಯ್ ದೇವಸ್ಥಾನದಿಂದ ನಿರ್ಗಮಿಸಿದರು. ಮುಖ್ಯಮಂತ್ರಿಯಾದ ಬಳಿಕ ವಿಜಯ್ ಅವರ ಮೊದಲ ಕೊಲ್ಲೂರು ಭೇಟಿ ರಾಜಕೀಯ ಹಾಗೂ ಅಭಿಮಾನಿ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ದೇವಸ್ಥಾನದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.