ಬಂಟ್ವಾಳ, ಜೂ. 12 (DaijiworldNews/TA): ತೀವ್ರ ಎದೆ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ನೈಟ್ ಬೀಟ್ ನಲ್ಲಿದ್ದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ (CPR) ನೆರವು ಒದಗಿಸಿ, ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಮಾನವೀಯ ಘಟನೆ ಬಂಟ್ವಾಳದ ಗೂಡಿನಬಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಕ್ರಂದನದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ (CPR) ನೆರವು ಒದಗಿಸಿದರು. ಬಳಿಕ ಯಾವುದೇ ಸಮಯ ವ್ಯರ್ಥ ಮಾಡದೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಕ್ರಮ ಕೈಗೊಂಡರು.
ಬಂಟ್ವಾಳ ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅವರ ಸಮಯಪ್ರಜ್ಞೆ, ತುರ್ತು ಸ್ಪಂದನೆ ಮತ್ತು ಮಾನವೀಯ ಸೇವೆಯಿಂದ ಅಶ್ರಫ್ ಅವರ ಜೀವ ಉಳಿದಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.