ಉಡುಪಿ, ಜೂ. 12 (DaijiworldNews/TA): ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ವಿಜಯ್ ಅವರ ಇದು ಮೊದಲ ಕರ್ನಾಟಕ ಪ್ರವಾಸವಾಗಿದ್ದು, ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿಗೆ ಆಗಮಿಸುವ ನಿರೀಕ್ಷೆಯಿದೆ.

ವಿಜಯ್ ಅವರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅರ್ಚಕ ವೃಂದ ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ಸರ್ಕಾರದ ಪ್ರೋಟೋಕಾಲ್ ಪ್ರಕಾರ ಸಿಎಂ ವಿಜಯ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಗೌರವಪೂರ್ವಕವಾಗಿ ದೇವಳದೊಳಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ತಿಳಿಸಿದ್ದಾರೆ.
ತಮಿಳುನಾಡಿನಿಂದ ಅನೇಕ ಗಣ್ಯರು ಹಾಗೂ ಕಲಾವಿದರು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುವುದು ಸಾಮಾನ್ಯ. ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ಹಲವು ಗಣ್ಯರು ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಎಂ. ಕೆ. ಸ್ಟಾಲಿನ್ ಅವರ ಕುಟುಂಬ ಸದಸ್ಯರು ಸಹ ದೇವಿಯ ದರ್ಶನ ಪಡೆದಿದ್ದರು ಎಂದು ಅವರು ತಿಳಿಸಿದ್ದಾರೆ.
ವಿಜಯ್ ಅವರ ಕುಟುಂಬದವರು ಈ ಹಿಂದೆ ಹಲವು ಬಾರಿ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದರೂ, ಮುಖ್ಯಮಂತ್ರಿ ಆದ ಬಳಿಕ ಅವರು ಮೊದಲ ಬಾರಿಗೆ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ದೇವಸ್ಥಾನದಲ್ಲಿ ವಿಜಯ್ ಅವರಿಗಾಗಿ ಯಾವುದೇ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿಲ್ಲ. ಸಾಮಾನ್ಯ ಭಕ್ತರಂತೆ ಅವರು ದೇವಿಯ ದರ್ಶನ ಪಡೆಯಲಿದ್ದು, ದೇವಸ್ಥಾನದ ಸಂಪ್ರದಾಯದಂತೆ ಯಾವುದೇ ವಿಶೇಷ ಆರಾಧನೆ ನಡೆಯುವುದಿಲ್ಲ ಎಂದು ಅರ್ಚಕರು ಸ್ಪಷ್ಟಪಡಿಸಿದ್ದಾರೆ.
ಇಂದು ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ನಡೆಯುವ ಉತ್ಸವ ಹಾಗೂ ಪೂಜಾ ಕಾರ್ಯಕ್ರಮಗಳು ಎಂದಿನಂತೆ ಜರುಗಲಿವೆ. ಇದು ಸಿಎಂ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮವಲ್ಲ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.
ಅಲ್ಲದೆ, ವಿಜಯ್ ಅವರು ಮಂಗಳಾರತಿ ನಡೆಯುವ ಸಮಯದಲ್ಲಿ ದೇವಸ್ಥಾನಕ್ಕೆ ಆಗಮಿಸಿದರೆ, ಮಂಗಳಾರತಿಯನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ದೇವಿಯ ಮೇಲಿನ ಭಕ್ತಿಯಿಂದ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದು ನಿತ್ಯಾನಂದ ಅಡಿಗ ಹೇಳಿದ್ದಾರೆ.