ಕಾಸರಗೋಡು, ಜೂ. 01 (DaijiworldNews/AA): ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಹಾಗೂ ಶಾಫಿ ಬಂಡಸಾಲೆ ಅವರ ಕೃತಿ ಪರಿಚಯ ಕಾರ್ಯಕ್ರಮ ಶನಿವಾರ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು.









ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು, "ಭಾಷೆ, ಸಂಸ್ಕೃತಿ ಉಳಿಸುವ ಪ್ರಯತ್ನ ನಡೆಯಬೇಕಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ನೀಡಿಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ ಭಾಷಾ ಅಭಿವೃದ್ಧಿಗೆ ಒತ್ತು ನೀಡುತ್ತಿದೆ" ಎಂದರು.
ಶಾಸಕ ಎ.ಕೆ.ಎಂ ಅಶ್ರಫ್ ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, "ಕೇರಳದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗಾಗಲೇ ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಈ ಬಗ್ಗೆ ಕರಡು ಯೋಜನೆ ತಯಾರಿಸಲಾಗುತ್ತಿದೆ. ಸರ್ಕಾರ ಪ್ರಾಧಿಕಾರ ರಚನೆಗೆ ಅಸ್ತು ನೀಡುವ ಭರವಸೆಯಿದೆ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅವರು ವಹಿಸಿದ್ದರು. ಸಮಾರಂಭದಲ್ಲಿ ಎಂ.ಶಾಫಿ ಬಂಡಸಾಲ ಅವರ ಮನದ ಮಾತು ಕವನ ಸಂಕಲನದ ಬಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ಕೃತಿಕಾರ ಎಂ.ಶಾಫಿ ಬಂಡಸಾಲೆ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಸಾಮಾಜಿಕ ಕಾರ್ಯಕರ್ತೆ ಸುಜಾತಾ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ರಾಘವ ಚೇರಾಲು, ಮೊಹಮ್ಮದ್ ಅಝೀಂ ಮಣಿಮುಂಡ, ಇಬ್ರಾಹಿಂ ಕುಂಞ, ಗೌರವಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆರ್ಯಭಟ ಪ್ರಶಸ್ತಿ ವಿಜೇತ ಪ್ರೊ.ಎ.ಶ್ರೀನಾಥ್ ಕಾಸರಗೋಡು ಹಾಗೂ ಯುವ ವೈದ್ಯೆ ಡಾ.ಷನಾ ಅವರನ್ನು ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಜಯ ಮಣಿಯಂಪಾರೆ ವಂದಿಸಿದರು. ಪುರುಷೋತ್ತಮ ಭಟ್.ಕೆ. ಕಾರ್ಯಕ್ರಮ ನಿರೂಪಿಸಿದರು.