ಉಡುಪಿ, ಮೇ. 31 (DaijiworldNews/TA) : 34 ವರ್ಷಗಳಿಗೂ ಅಧಿಕ ಕಾಲ ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆಎಸ್ಆರ್ಟಿಸಿ ಹಿರಿಯ ಚಾಲಕ ಜೋಸೆಫ್ ಮಚಾದೊ ಅವರನ್ನು ಮುಂಬೈನ ಮೀರಾರೋಡ್ ನ ಬಸ್ ಅಭಿಮಾನಿಗಳು, ನಿತ್ಯ ಪ್ರಯಾಣಿಕರು ಹಾಗೂ ಸ್ಥಳೀಯ ಬಸ್ ಏಜೆಂಟರು ಸನ್ಮಾನಿಸಿ ಗೌರವಿಸಿದರು.

ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಜೋಸೆಫ್ ಮಚಾದೊ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ ಮಂಗಳೂರು–ಮುಂಬೈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಪ್ರೀತಿಗೆ ಪಾತ್ರರಾಗಿದ್ದ ಅವರು ತಮ್ಮ ವೃತ್ತಿಪರತೆ, ಸುರಕ್ಷಿತ ಚಾಲನೆ ಹಾಗೂ ಸೌಹಾರ್ದಯುತ ನಡವಳಿಕೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಜೋಸೆಫ್ ಮಚಾದೊ ಅವರು ಮುಖ್ಯವಾಗಿ ಮಂಗಳೂರು–ಮುಂಬೈ ಮಾರ್ಗದಲ್ಲಿ ವೋಲ್ವೊ ಸೆಮಿ-ಸ್ಲೀಪರ್ ಬಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದು, ಪ್ರಯಾಣಿಕರು ಹಾಗೂ ಬಸ್ ಅಭಿಮಾನಿಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು.
ಅವರ ನಿವೃತ್ತಿಯ ಅಂಗವಾಗಿ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸ್ಥಳೀಯ ಬಸ್ ಏಜೆಂಟರು, ಬಸ್ ಅಭಿಮಾನಿಗಳು ಹಾಗೂ ನಿತ್ಯ ಪ್ರಯಾಣಿಕರು ಭಾಗವಹಿಸಿ ಗೌರವ ಸಲ್ಲಿಸಿದರು. ಮೀರಾರೋಡ್ ನ ಸೇಂಟ್ ಜೋಸೆಫ್ ಚರ್ಚ್ ಸಹಾಯಕ ಧರ್ಮಗುರು ರೆವರೆಂಡ್ ಫಾ. ಅಶ್ವಿನ್ ರೋಹನ್ ಡಿಸಿಲ್ವಾ ಅವರು ಉಪಸ್ಥಿತರಿದ್ದು ಜೋಸೆಫ್ ಮಚಾದೊ ಅವರನ್ನು ಸನ್ಮಾನಿಸಿದರು.