ಮಂಗಳೂರು, ಮೇ. 22 (DaijiworldNews/TA): ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಸೆಕೆಯಿಂದ ಬಳಲುತ್ತಿದ್ದ ಜನರಿಗೆ ಇಂದು ಮುಂಜಾನೆ ಸುರಿದ ಧಾರಾಕಾರ ಮಳೆ ತಂಪಿನ ಅನುಭವ ನೀಡಿದೆ. ಬೆಳ್ಳಂಬೆಳಗ್ಗೆ ಆರಂಭವಾದ ಮಳೆಯು ನಗರದ ಹಲವು ಭಾಗಗಳಲ್ಲಿ ಉತ್ತಮ ಪ್ರಮಾಣದಲ್ಲಿ ದಾಖಲಾಗಿದೆ.

ಪಂಪ್ವೆಲ್, ಜ್ಯೋತಿ, ಬೋಂದೆಲ್, ತೊಕ್ಕೊಟ್ಟು, ಉಳ್ಳಾಲ ಸೇರಿದಂತೆ ಮಂಗಳೂರಿನ ಅನೇಕ ಪ್ರದೇಶಗಳಲ್ಲಿ ಮಳೆ ಜೋರಾಗಿ ಸುರಿದಿದೆ. ದಿಢೀರನೆ ಆರಂಭವಾದ ಮಳೆಯಿಂದಾಗಿ ಕೆಲಸಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಕೆಲಕಾಲ ತೊಂದರೆ ಅನುಭವಿಸಿದರು.
ಮಳೆಯ ನೀರು ರಸ್ತೆಗಳಲ್ಲಿ ಹರಿದು ಕೆಲವೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪ್ರಮುಖ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದ ದೃಶ್ಯಗಳು ಕಂಡುಬಂದವು. ಆದರೆ ತೀವ್ರ ಬಿಸಿಲು ಮತ್ತು ಉಕ್ಕಿನ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತುಸು ನಿರಾಳತೆಯನ್ನು ತಂದಿದೆ. ಮುಂದಿನ ಕೆಲವು ದಿನಗಳಲ್ಲೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.