ಕಾಸರಗೋಡು, ಮೇ. 21 (DaijiworldNews/TA): ಮೂರು ತಿಂಗಳ ಗಂಡು ಮಗು ಗಂಟಲಲ್ಲಿ ಎದೆ ಹಾಲು ಸಿಲುಕಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಕಾಸರಗೋಡಿನ ನೆಲ್ಲಿಕುಂಜೆ ಕಸಬಾ ತಾಯಿಲ್ ಹೌಸ್ನ ಶಾಜಹಾನ್ ಮತ್ತು ಆಯಿಷಾ ದಂಪತಿ ಪುತ್ರ ತ್ವಾಹಾ ಅಬ್ದುಲ್ಲ ಸಾವಿಗೀಡಾದ ಮಗು.

ಈ ಮಗುವಿಗೆ ಮೇ 19 ರಂದು ರಾತ್ರಿ ತಾಯಿ ಎದೆಹಾಲು ಉಣಿಸಿ ತೊಟ್ಟಿಲಲ್ಲಿ ಮಲಗಿಸಿದ್ದರೆನ್ನಲಾಗಿದೆ. ಮೇ 20 ರಂದು ಬೆಳಗ್ಗೆ 6 ರ ವೇಳೆಗೆ ಮಗು ಚಲನರಹಿತವಾಗಿರುವುದನ್ನು ಗಮನಿಸಿದ ಮನೆಯವರು ಮಗುವನ್ನು ತತ್ಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗು ಸಾವಿಗೀಡಾಗಿರುವುದನ್ನು ದೃಢಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ ಮಗುವಿನ ಸಾವಿಗೆ ನಿಖರ ಕಾರಣ ಲಭಿಸಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.