ಸುಳ್ಯ, ಏ. 27 (DaijiworldNews/TA): ಬೆಳ್ಳಾರೆ ಗ್ರಾಮದ ನೇಲ್ಯಮಜಲು ಪುಡ್ಕಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಗೌರಿ ಹೊಳೆಯ ಕಾಲು ಸೇತುವೆ ಶಿಥಿಲಗೊಂಡಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.




ಈ ಕಾಲುಸಂಕದ ಕಾಂಕ್ರೀಟ್ ಕುಸಿಯುತ್ತಿದೆ. ಕಬ್ಬಿಣಗಳಿಗೆ ತುಕ್ಕು ಹಿಡಿದು ಕರಗುತ್ತಿವೆ. ಈ ಬಗ್ಗೆ 2024 ರಲ್ಲಿ ಇಲ್ಲಿಯ ಆಸುಪಾಸಿನವರು ಜಿಲ್ಲಾಧಿಕಾರಿ, ಶಾಸಕರು, ಉಸ್ತುವಾರಿ ಸಚಿವರಿಗೆ ಮನವಿ ನೀಡಿದರೂ ಕೂಡ ಯಾವುದೇ ಸ್ಪಂದನೆ ಈವರೆಗೆ ಸಿಕ್ಕಿಲ್ಲ ಎನ್ನಲಾಗಿದೆ. ನೇಲ್ಯಮಜಲು ಪುಡ್ಕಾಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಕಾಲು ಸೇತುವೆಯು 15 ಮನೆಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಇಲ್ಲಿ ಎಸ್ಸಿ ಎಸ್ಟಿ ಕಾಲೋನಿಯ 7 ಮನೆಗಳು ಸಹಿತ ಮುಸ್ಲಿಂ, ಕ್ರಿಶ್ಚಿಯನ್ ಹಿಂದೂಗಳ 8 ಮನೆಗಳಿವೆ.
ಈ ಮನೆಗಳಿಗೆ ಬೇರೆ ಯಾವುದೇ ಸಂಪರ್ಕಿಸುವ ರಸ್ತೆ ಇಲ್ಲವಾಗಿದ್ದು, ಇದೊಂದೇ ಮಾರ್ಗವಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದು ಇದರಿಂದ ಅವರ ಮನೆಗಳಿಗೆ ಹೋಗಲು ಅಸಾಧ್ಯವಾಗಿದೆ. ಬೆಳ್ಳಾರೆ ಮತ್ತು ಸುಳ್ಯಕ್ಕೆ ಹೋಗುವ ಶಾಲಾ ಮಕ್ಕಳು ಕೂಡ ಇದ್ದಾರೆ. ಮಳೆಗಾಲದಲ್ಲಿ ಕೆಲವೊಂದು ಸಲ ನೀರು ತುಂಬಿ ಹರಿಯುವುದರಿಂದ ಶಾಲೆಗೆ ಹೋಗಲು ಕೂಡ ಅಸಾಧ್ಯವಾಗಿದೆ. ಈ ಕಾಲು ಸೇತುವೆಯು ಮಳೆಗಾಲದಲ್ಲಿ ಅಪಾಯಕ್ಕೆ ಕಾರಣವಾಗುತ್ತಿದ್ದು ಸೇತುವೆಯು ಬಿರುಕು ಬಿಟ್ಟಿದ್ದರಿಂದ ಸೇತುವೆಯ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ಸೇತುವೆಯ ತುಂಡಾಗಿ ನಾಗರಿಕರು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ.
ತಡೆಗೋಡೆ ಇಲ್ಲದೆ ಮಣ್ಣುಗಳೆಲ್ಲ ಜರಿದು ಸದ್ಯಕ್ಕೆ ತಾತ್ಕಾಲಿಕವಾಗಿ ಅಡಿಕೆ ಮರದ ತುಂಡುಗಳನ್ನು ಹಾಕಿ ಸದ್ಯಕ್ಕೆ ನಡೆದುಕೊಂಡು ಹೋಗುತ್ತಾ ಇದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಮಳೆಗಾದಲ್ಲಿ ಈ ಭಾಗದ ಜನರ ಆರೋಗ್ಯ ಹದಗೆಟ್ಟರೆ ಆಸ್ಪತ್ರೆ ಕರೆದುಕೊಂಡು ಅಸಾಧ್ಯವಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.