ಮಂಗಳೂರು, ಏ. 27 (DaijiworldNews/TA): ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಯ ಮಾರ್ಗದಲ್ಲಿ ಅಡಚಣೆಯುಂಟು ಮಾಡುತ್ತಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಗತ ಕೇಬಲ್ ಅಳವಡಿಸುವ 67 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ.

ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ದೊರೆತಿದೆ. ಸಿಕ್ಕಂತಾಗಿದೆ. ಪ್ರತಿ ವರ್ಷ ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಾಲು ಸಾಲಾಗಿ ಸಾಗುವ ಎತ್ತರದ ಸ್ತಬ್ಧಚಿತ್ರಗಳು ಮತ್ತು ರಥಗಳಿಗೆ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು ದೊಡ್ಡ ಅಡಚಣೆಯಾಗಿದ್ದವು. ಸುರಕ್ಷತೆಯ ದೃಷ್ಟಿಯಿಂದ ಮೆರವಣಿಗೆಯ ಸಮಯದಲ್ಲಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು.
ಈ ಗಂಭೀರ ಸಮಸ್ಯೆಯನ್ನು ಮನಗಂಡ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮೂಲಕ ಸರಕಾರಕ್ಕೆ ವಿಶೇಷ ಮನವಿ ಸಲ್ಲಿಸಿತ್ತು. ಈ ಐತಿಹಾಸಿಕ ಯೋಜನೆಯ ಜಾರಿಗೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಎಂಎಲ್ಸಿ ಮಂಜುನಾಥ ಭಂಡಾರಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.