ಮಂಗಳೂರು/ಉಡುಪಿ, ಏ. 20 (DaijiworldNews/AA): ಶಾಲಾ ರಜೆಗಳು ಮತ್ತು ಸತತ ಎರಡು ದಿನಗಳ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿವೆ.

ಭಾನುವಾರ ಅಕ್ಷಯ ತೃತೀಯವೂ ಆಗಿದ್ದರಿಂದ, ಶುಭ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿತ್ತು. ಇದರ ಪರಿಣಾಮವಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿಗಿಂತಲೂ ಅಧಿಕವಾಗಿತ್ತು.
ಸೋಮವಾರ ಬಸವ ಜಯಂತಿ ನಿಮಿತ್ತ ಸರ್ಕಾರಿ ರಜೆ ಘೋಷಿಸಿರುವುದರಿಂದ, ಶನಿವಾರವೂ ರಜೆ ಪಡೆದವರಿಗೆ ಸತತ ಮೂರು ದಿನಗಳ ರಜೆ ಲಭಿಸಿದಂತಾಗಿದೆ. ಅನೇಕ ಕುಟುಂಬಗಳು ಮುಂಚಿತವಾಗಿಯೇ ಯೋಜಿಸಿ ಪ್ರವಾಸಕ್ಕೆ ಹೊರಟಿವೆ. ಖಾಸಗಿ ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಕಾರಣ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.
ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ, ಬಪ್ಪನಾಡು, ಕಾಪು ಮತ್ತು ಉಚ್ಚಿಲ ದೇವಸ್ಥಾನಗಳು, ಉಡುಪಿ ಶ್ರೀಕೃಷ್ಣ ಮಠ, ಮಂದಾರ್ತಿ ದುರ್ಗಾಪರಮೇಶ್ವರಿ, ಆನೆಗುಡ್ಡೆ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದರ್ಶನಕ್ಕಾಗಿ ಭಕ್ತರು ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಸೋಮವಾರವೂ ಸಹ ಇದೇ ರೀತಿಯ ಜನದಟ್ಟಣೆ ಮುಂದುವರಿಯುವ ನಿರೀಕ್ಷೆಯಿದೆ.
ಬೆಳಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡಿದ ಪ್ರವಾಸಿಗರು, ಸಂಜೆ ವೇಳೆ ಕಡಲತೀರಗಳಿಗೆ ಭೇಟಿ ನೀಡಿದರು. ಉಳ್ಳಾಲದಿಂದ ಬೈಂದೂರು ಸೋಮೇಶ್ವರದವರೆಗೆ ಎಲ್ಲ ಸಮುದ್ರ ತೀರಗಳು ಪ್ರವಾಸಿಗರಿಂದ ತುಂಬಿ ಹೋಗಿದ್ದವು. ವಿಶೇಷವಾಗಿ ಪಣಂಬೂರು, ಕಾಪು ಮತ್ತು ಮಲ್ಪೆ ಬೀಚ್ಗಳಲ್ಲಿ ಜನಸಮೂಹವನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಲ್ಲದೆ, ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಪ್ರವಾಸಿಗರು ಪರದಾಡುವಂತಾಯಿತು.