ಮಂಗಳೂರು, ಏ. 19 (DaijiworldNews/AA): ನಗರ ಜೆಪ್ಪಿನ ಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬೃಹತ್ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಪೆರ್ಮಾನ್ನೂರು, ಪಿಲಾರು ಹೊಸಗದ್ದೆ ಮನೆ ನಿವಾಸಿ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40), ನಜರತ್ ಅಲಿ (37) ಬಂಧಿತ ಆರೋಪಿಗಳು.
ಬೈಕ್ ನಲ್ಲಿ ಎಂಡಿಎಂಎ ಅನ್ನು ಇಟ್ಟುಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಕಂಕನಾಡಿ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಅವರು ಹೊಂದಿದ್ದ 46,50,000ರೂ. ಮೌಲ್ಯದ 465.8 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಕಂಕನಾಡಿ ನಗರ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಆರೋಪಿ ಫರ್ವೇಜ್ ಎಂಬಾತನು ಮಂಗಳೂರಿನ ಯುವ ಸಮುದಾಯ ಮತ್ತು ಕಾಲೇಜು ವಿಧ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ತಂದು ಮಂಗಳೂರು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿ ಫರ್ವೇಜ್ ಎಂಬಾತನ ವಿರುದ್ದ ಈಗಾಗಲೇ ಪಾಂಡೇಶ್ವರ, ವಾಮಂಜೂರು, ಬಂದರು ಪೊಲೀಸ್ ಠಾಣೆ, ಬೆಂಗಳೂರಿನ ಅಮೃತಹಳ್ಳಿ, ಮತ್ತು ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಈತನು ರೂಢಿಗತ ಡ್ರಗ್ ಪೆಡ್ಲರ್ ಆಗಿರುತ್ತಾನೆ. ಈತನ ಸ್ನೇಹಿತ ನಜರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಾ ಈ ಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಾನೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ತನಿಖೆ ಮುಂದುವರೆದಿದೆ.