ಮಂಗಳೂರು, ಏ. 19 (DaijiworldNews/TA): ಬೇಸಗೆಯ ನೀರಿನ ಬರ ಹಾಗೂ ಮಳೆಗಾಲದ ಪ್ರಾಕೃತಿಕ ಅವಘಡಗಳನ್ನು ಎದುರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.

ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಅನಿವಾರ್ಯವಾದರೆ ಅವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅತ್ಯಧಿಕ ಉಷ್ಣಾಂಶ, ಗುಡುಗು, ಸಿಡಿಲು, ಮಳೆ ಮುಂತಾದ ಪ್ರಾಕೃತಿಕ ತೊಂದರೆಗಳನ್ನು ಎದುರಿಸಲು ಆರೋಗ್ಯ ಕೇಂದ್ರಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಇದ್ದು, ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ. ಜೂ. 15ರ ವರೆಗೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ತುಂಬೆ ಡ್ಯಾಂ ಅಲ್ಲದೆ, ಎಎಂಆರ್, ಹರೇಕಳ ಡ್ಯಾಂನಿಂದಲೂ ನೀರು ಪಡೆಯಲಾಗುವುದು. ಪ್ರಸಕ್ತ ನೀರಿನ ಒಳ ಹರಿವು ಇದ್ದು, ಮೇ ಕೊನೆ ವಾರದಲ್ಲಿ ಅವಶ್ಯವಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ ನೀರಿನ ರೇಶನಿಂಗ್ ಮಾಡಲಾಗು ವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.