ಸುಳ್ಯ, ಏ. 14 (DaijiworldNews/AA): ಸುಮಾರು 25 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದ ಘಟನೆ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ಸೋಮವಾರ ನಡೆದಿದೆ.


ಸುಮಾರು 20 ರಿಂದ 22 ವರ್ಷ ಪ್ರಾಯದ ಗಂಡಾನೆ ಭಾನುವಾರ ತಡರಾತ್ರಿ 11:30ರ ಸುಮಾರಿಗೆ ರಾಮ ನಾಯ್ಕ ಎಂಬುವವರ ತೋಟದ ಅಂಚಿನಲ್ಲಿದ್ದ ಬಾವಿಗೆ ಬಿದ್ದಿತ್ತು. ಆನೆಯ ಚೀರಾಟ ಕೇಳಿದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಸೋಮವಾರ ಮುಂಜಾನೆ 6:00 ಗಂಟೆಗೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿತು. ಬಾವಿಯಿಂದ ಆನೆ ಮೇಲೆ ಬರಲು ಅನುಕೂಲವಾಗುವಂತೆ ಹಿಟಾಚಿ ಯಂತ್ರದ ಮೂಲಕ ಬಾವಿಯ ಒಂದು ಬದಿಯಲ್ಲಿ ಇಳಿಜಾರು ಹಾದಿಯನ್ನು ನಿರ್ಮಿಸಲಾಯಿತು. ಸುಮಾರು ಏಳು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ, ಮಧ್ಯಾಹ್ನ 12:50ರ ಸುಮಾರಿಗೆ ಆನೆಯು ಹಿಟಾಚಿ ತೋಡಿದ ದಾರಿಯ ಮೂಲಕ ಸುರಕ್ಷಿತವಾಗಿ ಮೇಲಕ್ಕೆ ಬಂತು.
ಬಾವಿಯಿಂದ ಹೊರಬರುತ್ತಿದ್ದಂತೆ ಆನೆಯು ತೋಟದ ಮೇಲ್ಭಾಗದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯತ್ತ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಿಟಾಚಿ ಯಂತ್ರವನ್ನು ಹಾದುಕೊಂಡು ಹೋದ ಆನೆ, ಮೊದಲು ತೋಟದ ಕೆಳಭಾಗಕ್ಕೆ ಧಾವಿಸಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಜನವಸತಿ ಪ್ರದೇಶದಿಂದ ದೂರ ಓಡಿಸಿದರು. ಅಂತಿಮವಾಗಿ ಆನೆಯು ಪೂಮಲೆ ಅರಣ್ಯ ಶ್ರೇಣಿಯತ್ತ ತೆರಳಿತು.
ಸಿಸಿಎಫ್ ಕಾರಿಕಾಲನ್ ಮತ್ತು ಡಿಎಫ್ಒ ಆಂಥೋನಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಪ್ರೊಬೆಷನರಿ ಎಸಿಎಫ್ ಸಂಕೇತ್ ಆದವ್, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ಆರ್.ಎಫ್.ಒ ಕಿರಣ್ ಬಿ.ಎಂ ಮತ್ತು ಸುಬ್ರಹ್ಮಣ್ಯ ಆರ್.ಎಫ್.ಒ ವಿಮಲ್ ಬಾಬು, ಸುಳ್ಯ ಎಸ್.ಐ ಸಂತೋಷ್ ಬಿ.ಪಿ, ಅಗ್ನಿಶಾಮಕ ದಳದ ಎಸ್.ಐ ಕಿರಣ್ ಕುಮಾರ್, ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಹಾಗೂ ಆನೆ ಕಾರ್ಯಪಡೆಯ ಸದಸ್ಯರು ಜನಸಂದಣಿ ನಿಯಂತ್ರಣ ಮತ್ತು ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.