ವಿಟ್ಲ, ಏ. 13 (DaijiworldNews/AK): ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ಹಾಡಹಗಲೇ ಕಳ್ಳತನವೊಂದು ನಡೆದಿದೆ. ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾಗಿದ್ದಾನೆ.

ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಅತಿ ವೇಗವಾಗಿ ಬಂದು ಮಗುವಿನ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕೃತ್ಯದ ದೃಶ್ಯವು ಸಮೀಪದ ಸೂಪರ್ ಮಾರ್ಕೆಟ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಕಳ್ಳತನದ ಪ್ರಕರಣಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಈ ಹಿಂದೆ ಕೂಡ ಈ ಪರಿಸರದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ, ಅಡಿಕೆ ಹಾಗೂ ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿದ ಘಟನೆಗಳು ವರದಿಯಾಗಿದ್ದವು. ಈಗ ನೇರವಾಗಿ ಮಗುವಿನ ಸರವನ್ನೇ ಕಸಿದಿರುವುದು ಪೋಷಕರ ನಿದ್ದೆಗೆಡಿಸಿದೆ.
ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.