ಕುಂದಾಪುರ, ಏ. 06 (DaijiworldNews/TA): ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದು ಸುಟ್ಟು ಕರಕಲಾದ ಘಟನೆ ಕುಂದಾಪುರದ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ಸಂಭವಿಸಿದೆ.

ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಅವರ ಮನೆ ಹಾನಿಗೊಳಗಾಗಿರುವುದು. ಮನೆಯ ಮಾಡು, ಗೋಡೆಗೂ ಹಾನಿಯಾಗಿದೆ.ಮನೆ ಒಳಗಿದ್ದ ಸ್ವಲ್ಪ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ. ಗಣಪು ಶೆಡ್ತಿ ಹಾಗೂ ಅವರ ಮೊಮ್ಮಗ ಮಾತ್ರ ಈ ಮನೆಯಲ್ಲಿದ್ದು, ಶನಿವಾರ ರಾತ್ರಿ ಮನೆಯಿಂದ ಸ್ವಲ್ಪ ದೂರದ ಮನೆಯೊಂದರಲ್ಲಿ ಭಜನ ಕಾರ್ಯಕ್ರಮ ಇದ್ದುದರಿಂದ ಮನೆಗೆ ಬೀಗ ಹಾಕಿ ಅಲ್ಲಿಗೆ ತೆರಳಿದ್ದರು. ರಾತ್ರಿ 12 ಗಂಟೆ ಅನಂತರ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.
2 ಗಂಟೆಯ ಸುಮಾರಿಗೆ ಆ ಮನೆಯ ಹತ್ತಿರದ ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ನೋಡಿ ಇತರರಿಗೆ ವಿಷಯ ತಿಳಿಸಿದ್ದಾರೆ. ಅಷ್ಟರೊಳಗೆ ಮನೆಯ ಬಹುತೇಕ ಭಾಗ ಸುಟ್ಟು ಹೋಗಿತ್ತು. ಕುಂದಾಪುರದ ಅಗ್ನಿ ಶಾಮಕ ದಳದ ತಂಡದವರು, ಸ್ಥಳೀಯರೆಲ್ಲ ಸೇರಿ ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡವುದನ್ನು ತಪ್ಪಿಸಿದ್ದಾರೆ.