ಹೆಬ್ರಿ, ಏ. 06 (DaijiworldNews/TA): ತಾಲೂಕಿನಲ್ಲಿ ಮತ್ತೆ ಆನೆ ಹೆಜ್ಜೆ ಗುರುತು ಕಂಡು ಬಂದಿದ್ದು, ನಾಡ್ಪಾಲು ಹಾಗೂ ಪೀತಬೈಲು ಎಂಬಲ್ಲಿನ ತೋಟಗಳಿಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಸಂಪೂರ್ಣ ಹಾನಿಗೊಳಿಸಿರುವ ಬಗ್ಗೆ ವರದಿಯಾಗಿದೆ.

ನಾಡ್ಪಾಲು ಗ್ರಾಮದ ತೆಂಗುಮಾರ್ ಲಕ್ಷ್ಮಣ ಗೌಡ, ಆನಂದ ಗೌಡ ಹಾಗೂ ಪೀತಬೈಲು ಜಯಂತ ಗೌಡ ಎಂಬವರ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಮರಗಳು, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳು ನಾಶ ಮಾಡಿವೆ. ರಾತ್ರೋರಾತ್ರಿ ಕಬ್ಬಿನಾಲೆ ಭಾಗಗಳಲ್ಲಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿರುವುದರಿಂದ ಮಲೆನಾಡು ಪ್ರದೇಶದ ಕುಟುಂಬಗಳು ತೊಂದರೆಗೆ ಒಳಗಾಗಿವೆ. ರಾತ್ರಿ ಹೊತ್ತಿನಲ್ಲಿ ಸಂಚರಿಸುವುದಕ್ಕೂ ಜನರು ಭೀತಿ ಮತ್ತು ಆತಂಕ ಪಡುತಿದ್ದಾರೆ. ಸುಮಾರು ಹನ್ನೆರಡು ವರ್ಷದ ಸಣ್ಣ ಆನೆ ಈ ದಾಳಿ ನಡೆಸಿದೆ ಎಂದು ಅಂದಾಜಿಸಲಾಗಿದೆ.
ಗುಡ್ಡಗಾಡು ಪ್ರದೇಶಗಳಲ್ಲಿ ಹಲಸು ಮತ್ತು ಮಾವಿನ ಋತುವಿನ ವೇಳೆ ಆನೆಗಳು ಹೆಚ್ಚು ಸಂಚರಿಸುತ್ತಿವೆ. ಕಬ್ಬಿನಾಲೆ ಪ್ರದೇಶದ ವಾಲಿಕುಂಜ ಗುಡ್ಡದ ಮೇಲ್ಭಾಗದಲ್ಲಿ ಈ ಆನೆ ಕಾಣಿಸಿಕೊಂಡಿದ್ದು, ಗೇಮ್ ರೋಡ್ ಮೂಲಕ ಮಲೆನಾಡಿನ ತಪ್ಪಲು ಪ್ರದೇಶಗಳಾದ ಕಬ್ಬಿನಾಲೆ, ನಾಡ್ಪಾಲು, ಚಾರ, ವರಂಗ, ಅಂಡಾರು ಹಾಗೂ ಕಾರ್ಕಳ ತಾಲೂಕಿನ ಶಿರ್ಲಾಲು, ಕೆರುವಾಶೆ ಭಾಗಗಳಲ್ಲಿ ಸಂಚರಿಸುತ್ತಿದೆ ಎನ್ನಲಾಗಿದೆ.