ಮಂಗಳೂರು, ಏ. 01 (DaijiworldNews/AA): ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಇಬ್ಬರು ಯುವಕರು ನೀರು ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.


ಕುಂಜತ್ತಬೈಲ್ ನಿವಾಸಿಗಳಾದ ಗಣೇಶ್ (28) ಮತ್ತು ರಾಯಲ್ (24) ನೀರು ಪಾಲಾದ ಯುವಕರು ಎಂದು ಗುರುತಿಸಲಾಗಿದೆ.
ಗಣೇಶ್, ರಾಯಲ್ ಮತ್ತು ನಿತೇಶ್ (29) ಎಂಬ ಮೂವರು ಯುವಕರ ತಂಡ ಬುಧವಾರ ಮುಂಜಾನೆ ಸುಮಾರು 1:30 ರ ಸುಮಾರಿಗೆ ಸಣ್ಣ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದರು. ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ನಿತೇಶ್ ಅವರು ಈಜಿ ದಡ ಸೇರಿದ್ದಾರೆ. ಗಣೇಶ್ ಮತ್ತು ರಾಯಲ್ ಅವರಿಗೆ ಈಜಲು ಬಾರದೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.