ಬೆಳ್ತಂಗಡಿ, ಮಾ. 31 (DaijiworldNews/AA): ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ, ಇಬ್ಬರು ಸೋದರಿಯರು ರಸ್ತೆಗೆ ಎಸೆಯಲ್ಪಟ್ಟ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ರೇಷ್ಮೆ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಗಾಯಗೊಂಡವರನ್ನು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಿವಾಸಿಗಳಾದ ನಾಗರಾಜ್ ಮತ್ತು ರೂಪ ದಂಪತಿಯ ಪುತ್ರಿಯರಾದ ಚರಿಷ್ಮಾ (ಎಸ್ಎಸ್ಎಲ್ಸಿ ವಿದ್ಯಾರ್ಥಿನಿ) ಮತ್ತು ಚಸ್ಮಿಕಾ (ಪಿಯುಸಿ ವಿದ್ಯಾರ್ಥಿನಿ) ಎಂದು ಗುರುತಿಸಲಾಗಿದೆ. ಸಹೋದರಿಯರಿಬ್ಬರು ಗೇರುಕಟ್ಟೆಯಿಂದ ಬೆಳ್ತಂಗಡಿಗೆ ತೆರಳಲು ಬಸ್ ಹತ್ತಿದ್ದರು.
ವರದಿಗಳ ಪ್ರಕಾರ, ಬಸ್ ರೇಷ್ಮೆ ರಸ್ತೆಯ ಬಳಿ ಚಲಿಸುತ್ತಿದ್ದಾಗ ಆಕಸ್ಮಿಕವಾಗಿ ಬಸ್ಸಿನ ಬಾಗಿಲು ತೆರೆದುಕೊಂಡಿದೆ. ಈ ವೇಳೆ ಬಾಗಿಲ ಸಮೀಪವೇ ನಿಂತಿದ್ದ ಈ ಸೋದರಿಯರು ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ತಕ್ಷಣವೇ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಮತ್ತು ಉಜಿರೆಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಇನ್ನು ಇಂದು ಚರಿಷ್ಮಾಗೆ ಎಸ್ಎಸ್ಎಲ್ಸಿ ಪರೀಕ್ಷೆ ಇತ್ತು. ಆಕೆ ತಾನು ಗಾಯಗೊಂಡಿದ್ದರೂ ಸಹ ಲೆಕ್ಕಿಸದೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ.
ಮೊದಲಿಗೆ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಭಾವಿಸಲಾಗಿತ್ತು. ಆದರೆ ವೈದ್ಯಕೀಯ ತಪಾಸಣೆ ಬಳಿಕ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಸದ್ಯ ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.