ಮಂಗಳೂರು, ಮಾ. 31 (DaijiworldNews/AA): ನಗರದಲ್ಲಿ ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಆಟೋ ಎಲ್ಪಿಜಿ ವಿತರಣೆಯಲ್ಲಿ ತೊಂದರೆ ಎದುರಾಗಿದ್ದು, ಎಲ್ಪಿಜಿ ಮೇಲೆ ಅವಲಂಬಿತವಾಗಿರುವ ಆಟೋ ರಿಕ್ಷಾ ಚಾಲಕರು ಮತ್ತು ಕೆಲವು ಟ್ಯಾಕ್ಸಿ ಮಾಲೀಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಎಲ್ಪಿಜಿ ಕೊರತೆಯಿಂದಾಗಿ ಬೆಲೆಯೂ ಗಗನಕ್ಕೇರಿದೆ. ಕೆಲವು ಗ್ಯಾಸ್ ಸ್ಟೇಷನ್ಗಳಲ್ಲಿ ಇಂಧನ ಲಭ್ಯವಿಲ್ಲದ ಕಾರಣ, ಆಟೋ ಚಾಲಕರು ಅನಿಲಕ್ಕಾಗಿ ಒಂದು ಬಂಕ್ನಿಂದ ಮತ್ತೊಂದು ಬಂಕ್ಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇರಾನ್ ಸಂಘರ್ಷದ ಮೊದಲು ಆಟೋ ಎಲ್ಪಿಜಿ ಬೆಲೆ ಪ್ರತಿ ಲೀಟರ್ಗೆ 65 ರೂ. ಇತ್ತು. ಆದರೆ ಈಗ ಈ ದರ ಹಠಾತ್ತನೆ 85 ರೂ. ಗೆ ಏರಿಕೆಯಾಗಿದೆ. ಖಾಸಗಿ ಮೂಲಗಳಿಂದ ಎಲ್ಪಿಜಿ ಪಡೆಯುವ ಕೆಲವು ಬಂಕ್ಗಳಲ್ಲಿ ಬೆಲೆ ಪ್ರತಿ ಲೀಟರ್ಗೆ 99.95 ರೂ. ವರೆಗೆ ತಲುಪಿದ್ದು, ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಲೆ ಏರಿಕೆಯ ಹಿನ್ನೆಲೆ ಕೆಲವು ಆಟೋ ಎಲ್ಪಿಜಿ ಬಂಕ್ಗಳು ವಿತರಣೆಯನ್ನೇ ಸ್ಥಗಿತಗೊಳಿಸಿವೆ ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ಎಲ್ಪಿಜಿ ದರದಲ್ಲಿ ಪದೇ ಪದೇ ಏರಿಳಿತವಾಗುತ್ತಿದ್ದು, ಅನಿಲದ ಕೊರತೆಯಿಂದಾಗಿ ಸೋಮವಾರ ನಗರದಾದ್ಯಂತ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.