Karavali
ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಭೀಕರ ಕೊಲೆ- ಹಳೆ ದ್ವೇಷದ ಶಂಕೆ
- Sat, Mar 28 2026 03:41:02 PM
-
ಮಂಗಳೂರು, ಮಾ. 28 (DaijiworldNews/AA): ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈಓವರ್ ಮೇಲೆ ಶುಕ್ರವಾರ ಮುಂಜಾನೆ ಮೀನು ವ್ಯಾಪಾರಿ, ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮೃತನನ್ನು ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ, ಬಂದರು ಪೊಲೀಸ್ ಠಾಣೆಯ ರೌಡಿಶೀಟರ್ ಆರೀಫ್ ಹುಸೇನ್ (42) ಅಲಿಯಾಸ್ 'ಟ್ಯಾಬ್ಲೆಟ್ ಆರೀಫ್' ಎಂದು ಗುರುತಿಸಲಾಗಿದೆ. ಮಾರ್ಚ್ 27ರಂದು ಮುಂಜಾನೆ ಸುಮಾರು 4:30ಕ್ಕೆ ಆರೀಫ್ ತನ್ನ ಬುಲೆಟ್ ಬೈಕ್ನಲ್ಲಿ ಉಚ್ಚಿಲದಿಂದ ಮಂಗಳೂರು ಮೀನುಗಾರಿಕಾ ಬಂದರಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವು ಫ್ಲೈಓವರ್ ಮೇಲೆ ಆರೀಫ್ ಅವರ ಬೈಕ್ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಬಳಿಕ ತಲ್ವಾರ್ಗಳಿಂದ ಅವರ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದೆ.
ಘಟನೆಯು ಮುಂಜಾನೆ ನಡೆದಿದ್ದರಿಂದ ಆರಂಭದಲ್ಲಿ ಯಾರಿಗೂ ಇದು ಕೊಲೆ ಎಂದು ತಿಳಿದಿರಲಿಲ್ಲ. ಆ ದಾರಿಯಾಗಿ ಸಾಗುತ್ತಿದ್ದ ವಾಹನ ಸವಾರರು ಇದೊಂದು ಅಪಘಾತವಿರಬಹುದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇದೊಂದು ವ್ಯವಸ್ಥಿತ ಕೊಲೆ ಎಂಬುದು ದೃಢಪಟ್ಟಿದೆ. ಡಿಸಿಪಿ ಮತ್ತು ಎಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ ಮತ್ತು ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ತೊಕ್ಕೊಟ್ಟು ಮೇಲ್ಸೇತುವೆಯು ರಾತ್ರಿಯ ವೇಳೆ ಸಾಕಷ್ಟು ಬೆಳಕಿನ ವ್ಯವಸ್ಥೆಯನ್ನು ಹೊಂದಿದ್ದರೂ, ಮುಂಜಾನೆ ಸಮಯದಲ್ಲಿ ಜನಸಂಚಾರವಿಲ್ಲದೆ ಖಾಲಿಯಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಮೊದಲೇ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಫ್ಲೈಓವರ್ ಮೇಲೆ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವುದು ಮತ್ತು ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳಿರುವುದು ಇಂತಹ ಅಪರಾಧಗಳಿಗೆ ಪ್ರೇರಣೆಯಾದಂತಿದೆ. ಇಲ್ಲಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಇಂತಹ ಪ್ರಕರಣಗಳ ಶೀಘ್ರ ಪತ್ತೆಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆರೀಫ್ ಮೇಲೆ ಈ ಹಿಂದೆಯೂ ನಡೆದಿತ್ತು ಕೊಲೆ ಯತ್ನ
ಮೃತ ಆರೀಫ್ ಮೇಲೆ ಈ ಹಿಂದೆ 2022ರ ಮೇ 24 ರಂದು ಉಚ್ಚಿಲ ಮುಳ್ಳುಗುಡ್ಡೆಯಲ್ಲಿ ಕೊಲೆ ಯತ್ನ ನಡೆದಿತ್ತು. ಅಂದು ಮೀನುಗಾರಿಕಾ ಬಂದರಿಗೆ ಕೆಲಸಕ್ಕೆ ತೆರಳುತ್ತಿದ್ದಾಗ ನೌಫಾಲ್ ಎಂಬಾತನ ನೇತೃತ್ವದ ನಾಲ್ವರು ದುಷ್ಕರ್ಮಿಗಳ ತಂಡವು ತಲ್ವಾರ್ನಿಂದ ದಾಳಿ ಮಾಡಿತ್ತು. ಕಾರಿನೊಳಗೆ ಅವಿತು ಕುಳಿತಿದ್ದ ಹಂತಕರು ದಿಢೀರ್ ಹೊರಬಂದು ಆರೀಫ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.ಆಗಿನ ದಾಳಿಗೆ ಹಣಕಾಸಿನ ವಿವಾದವೇ ಕಾರಣವಾಗಿತ್ತು. ಆರೀಫ್ ಸಹೋದರ ಕರೀಮ್ ಅವರು ನೌಫಾಲ್ ಮತ್ತು ಸಂಗಡಿಗರಿಂದ 60,000 ರೂಪಾಯಿ ಸಾಲ ಪಡೆದಿದ್ದರು. ಅಸಲನ್ನು ಮರಳಿಸಿ ಮೀನುಗಾರಿಕಾ ಉಪಕರಣಗಳನ್ನು ಬಿಡಿಸಿಕೊಂಡಿದ್ದರೂ, 7,000 ರೂಪಾಯಿ ಬಡ್ಡಿ ಹಣ ಬಾಕಿ ಇತ್ತು. ಈ ಹಣಕಾಸಿನ ಕಿತ್ತಾಟವೇ ಅಂದು ಆರೀಫ್ ಮೇಲಿನ ದಾಳಿಗೆ ಕಾರಣವಾಗಿತ್ತು.
ಆಟೋ ರಿಕ್ಷಾದಲ್ಲಿ ಪರಾರಿಯಾದರೇ ಹಂತಕರು?
ಕೊಲೆಗೆ ಬಳಸಲಾಗಿದ್ದ ಇನೋವಾ ಕಾರು ಬೆಳಿಗ್ಗೆ 8 ಗಂಟೆ ಸುಮಾರಿಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬುಡೋಳಿ ಎಂಬಲ್ಲಿ ಪತ್ತೆಯಾಗಿದೆ. ತಾಂತ್ರಿಕ ದೋಷದಿಂದಾಗಿ ಹಂತಕರು ಕಾರನ್ನು ಅಲ್ಲಿಯೇ ಬಿಟ್ಟು ಆಟೋ ರಿಕ್ಷಾದಲ್ಲಿ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಆರೋಪಿಗಳು ಬೆಂಗಳೂರಿನ ಕಡೆಗೆ ಪ್ರಯಾಣಿಸಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.ಕೊಲೆಯಾದ ವ್ಯಕ್ತಿಯ ಮೇಲೆ ಹಲವು ಪ್ರಕರಣಗಳು
ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಮಾಡುತ್ತಿದ್ದ ಆರೀಫ್ ವಿರುದ್ಧ 1998 ರಿಂದ 2021ರ ಅವಧಿಯಲ್ಲಿ ಬರ್ಕೆ, ಬಂದರು ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಹಾಗೂ ಕೊಲೆ ಯತ್ನ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಈತನ ವಿರುದ್ಧ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿದ್ದ ಕಾರಣ ತನ್ನ ಕುಟುಂಬದೊಂದಿಗೆ ಕೆ.ಸಿ ರೋಡ್ಗೆ ವಾಸ್ತವ್ಯ ಬದಲಿಸಿದ್ದ. 2021ರ ನಂತರ ಈತನ ಮೇಲೆ ಯಾವುದೇ ಹೊಸ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, 2022ರಲ್ಲಿ ಈತನ ಮೇಲೆ ಕೊಲೆ ಯತ್ನ ನಡೆದಿತ್ತು.ಬಾಡಿಗೆ ಕಾರು ಬಳಕೆ: ಮಾಲೀಕ ವಶಕ್ಕೆ
ಈ ಕೊಲೆ ಕೃತ್ಯದ ಪ್ರಮುಖ ಆರೋಪಿಗಳಲ್ಲಿ ಒಬ್ಬ ಉಳ್ಳಾಲದವನಾಗಿದ್ದು, ಕೃತ್ಯಕ್ಕೆ ಬಳಸಲಾದ ಇನೋವಾ ಕಾರನ್ನು ಎರಡು ದಿನಗಳ ಹಿಂದಷ್ಟೇ ತನ್ನ ಪರಿಚಯಸ್ಥರಿಂದ ಬಾಡಿಗೆಗೆ ಪಡೆದಿದ್ದ ಎಂದು ಹೇಳಲಾಗಿದೆ. ಕಾರಿನ ಮಾಲೀಕ ಮೂಲತಃ ಕೇರಳದವರಾಗಿದ್ದರೂ ಉಳ್ಳಾಲದಲ್ಲಿ ವಾಸಿಸುತ್ತಿದ್ದಾರೆ. ವಿಟ್ಲದಲ್ಲಿ ಕಾರು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಕಾರಿನ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.2022ರಲ್ಲಿ ಬಜಾಲ್ ನಿವಾಸಿ, ರೌಡಿಶೀಟರ್ ನೌಫಾಲ್ ಮತ್ತು ಆತನ ತಂಡವು ಆರೀಫ್ ಸಹೋದರ ಕರೀಮ್ ಜೊತೆಗಿನ ಹಣಕಾಸಿನ ವಿವಾದಕ್ಕಾಗಿ ಆರೀಫ್ ಮೇಲೆ ಕೊಲೆ ಯತ್ನ ನಡೆಸಿತ್ತು. ನಂತರ ಆ ಪ್ರಕರಣವು ರಾಜಿಯ ಮೂಲಕ ಇತ್ಯರ್ಥವಾಗಿತ್ತು. ಆದರೆ, 2025ರ ನವೆಂಬರ್ನಲ್ಲಿ ನೌಫಾಲ್ ಅಲಿಯಾಸ್ ಟೊಪ್ಪಿ ನೌಫಾಲ್ ಉಪ್ಪಳ ರೈಲ್ವೆ ಗೇಟ್ ಬಳಿ ಮೃತದೇಹವಾಗಿ ಪತ್ತೆಯಾಗಿದ್ದ. ಮಂಜೇಶ್ವರ ಪೊಲೀಸರು ಇದನ್ನು ರೈಲ್ವೆ ಅಪಘಾತ ಎಂದು ಪ್ರಕರಣ ದಾಖಲಿಸಿ ಮುಚ್ಚಿದ್ದರೂ, ನೌಫಾಲ್ ಬೆಂಬಲಿಗರು ಇದು ಸೇಡಿನ ಕೊಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು.
ನೌಫಾಲ್ ಸಾವಿನ ಬಗ್ಗೆ ಆರೀಫ್ ಸಂತಸ ವ್ಯಕ್ತಪಡಿಸಿದ್ದ ಎನ್ನಲಾಗಿದ್ದು, ಇದು ನೌಫಾಲ್ ಸಹಚರರನ್ನು ಮತ್ತಷ್ಟು ಕೆರಳಿಸಿತ್ತು. ಇದಲ್ಲದೆ, ಇತ್ತೀಚೆಗೆ ಬಂದರಿನಲ್ಲಿ ಉಳ್ಳಾಲ ಮೂಲದ ಆರೋಪಿಯೊಬ್ಬನ ತಂದೆಯೊಂದಿಗೆ ಆರೀಫ್ ಜಗಳವಾಡಿದ್ದ ಎನ್ನಲಾಗಿದೆ.
ಉಳ್ಳಾಲ, ಸುರತ್ಕಲ್, ವಾಮಂಜೂರು ಮತ್ತು ಬಂಟ್ವಾಳ ಮೂಲದ ಆರು ಮಂದಿಯ ತಂಡದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಹಲವು ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕಿನಿಂದ ಸಾಗುತ್ತಿದೆ.