ಮಂಗಳೂರು, ಮಾ. 28 (DaijiworldNews/AA): ಹೊಸ ಬಾವಿ ತೋಡುತ್ತಿದ್ದಾಗ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ತಲೆಗೆ ಬಿದ್ದು ವಲಸೆ ಕಾರ್ಮಿಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಾಲತ್ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.




ಮೃತರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ಮೂಲದ ಶಿವಕುಮಾರ್ ಜಿ.ಕೆ (30) ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ 4:30ರ ಸುಮಾರಿಗೆ ಕುತ್ತಾರಿನ ಸಾಲತ್ ನಗರದ ಖಾಲಿ ಜಾಗವೊಂದರಲ್ಲಿ ಹೊಸ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಒಟ್ಟು ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಶಿವಕುಮಾರ್ ಸೇರಿದಂತೆ ಮೂವರು ಕಾರ್ಮಿಕರು 30 ಅಡಿ ಆಳದ ಬಾವಿಯ ಒಳಗಿದ್ದರು. ಕ್ರೇನ್ ಮೂಲಕ ಬಾವಿಯೊಳಗಿನ ಮಣ್ಣನ್ನು ಕಬ್ಬಿಣದ ಬಕೆಟ್ನಲ್ಲಿ ಮೇಲೆತ್ತುತ್ತಿದ್ದಾಗ, ಹುಕ್ನಿಂದ ಕಳಚಿಕೊಂಡ ಬಕೆಟ್ ನೇರವಾಗಿ ಶಿವಕುಮಾರ್ ಅವರ ತಲೆಯ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾವಿಯಲ್ಲಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶಿವಕುಮಾರ್ ಪತ್ನಿ, ಮೂರು ವರ್ಷದ ಮಗ ಮತ್ತು ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಈ ಕುಟುಂಬ ತೊಕ್ಕೊಟ್ಟುವಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಶಿವಕುಮಾರ್ ಅವರು ಕೇವಲ ಎರಡು ವಾರಗಳ ಹಿಂದಷ್ಟೇ ತನ್ನ ಎರಡನೇ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಘಟನೆ ನಡೆಯುವ ಹಿಂದಿನ ದಿನವಷ್ಟೇ ಅವರು ತನ್ನ ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿಕೊಟ್ಟಿದ್ದರು.