ಮಂಗಳೂರು, ಮಾ. 26 (DaijiworldNews/TA): ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿಯೂ ಆಗಿರುವ ದರ್ಶನ್ ಎಚ್.ವಿ. ಅವರು ಗುರುವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 2026-27ನೆ ಸಾಲಿನ ಬಜೆಟ್ ಮಂಡಿಸಿದರು.

ಆರಂಭಿಕ ಶುಲ್ಕ ಸೇರಿದಂತೆ ಅಂದಾಜು 937.69 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದು. ಇದರಲ್ಲಿ ಅಂದಾಜು 781.51 ಕೋಟಿ ರೂ. ವೆಚ್ಚ ಪಾವತಿಗಳಾಗಿದೆ., ಈ ಮೂಲಕ ಅಂದಾಜು 156.17 ಕೋಟಿ ರೂ.ಗಳ ಮಿಗತೆ ಬಜೆಟ್ ಇದಾಗಿದೆ. ಬಜೆಟ್ ಪುಸ್ತಕವನ್ನು ಸಂಪೂರ್ಣ ಓದುವ ಮೂಲಕ 2026-27ನೆ ಸಾಲಿನ ಬಜೆಟ್ ಬಗ್ಗೆ ವಿವರ ನೀಡಿದ ಆಡಳಿತಾಧಿಕಾರಿ ದರ್ಶನ್ ಎಚ್.ವಿ., 2025-26ನೆ ಸಾಲಿನಲ್ಲಿ ಬಜೆಟ್ನಲ್ಲಿ ಒಟ್ಟು 644.64 ಕೋಟಿ ರೂ.ಗಳ ಜಮೆಗಳನ್ನು ನಿರೀಕ್ಷಿಸಲಾಗಿದ್ದು, ಡಿಸೆಂಬರ್ 2025ರ ಅಂತ್ಯಕ್ಕೆ 342.25 ಕೋಟಿ ರೂ. ಜಮೆಗಳನ್ನು ಸ್ವೀಕರಿಸಲಾಗಿದೆ. ಇದೇ ವೇಳೆ ಕಳೆದ ಸಾಲಿನಲ್ಲಿ 789.72 ಕೋಟಿ ರೂ. ಪಾವತಿಗಳಲ್ಲಿ ಪಾಲಿಕೆಯ ಸ್ವಯಂ ಸಂಪನ್ಮೂಲ ಕ್ರೋಢೀಕರಣ ಹಾಗೂ ಸರಕಾರದಿಂದ ಬಿಡುಗಡೆಯಾದ ಅನುದಾನಗಳ ಆಧಾರದಲ್ಲಿ ಡಿಸೆಂಬರ್ ಅಂತ್ಯಕ್ಕೆ 393.47 ಕೋಟಿ ರೂ.ಗಳನ್ನು ಪಾವತಿಸಿರುವುದಾಗಿ ತಿಳಿಸಿದರು.
2026-27ನೆ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 90 ಕೋಟಿ ರೂ., ನೀರು ಸರಬರಾಜು ಶುಲ್ಕವಾಗಿ 55 ಕೋಟಿ ರೂ., ಘನತ್ಯಾಜ್ಯ ನಿರ್ವಹಣಾ ಕರ 26 ಕೋಟಿ ರೂ., ಇತರ ಆದಾಯವಾಗಿ 26.48 ಕೋಟಿ ರೂ., ಕಟ್ಟಡ ಪರವಾನಿಗೆ- ಪ್ರೀಮಿಯಂ ಎಫ್ಎಆರ್ನಿಂದ 26 ಕೋಟಿ ರೂ., ಮಾರುಕಟ್ಟೆ ಸಾಲ7.31 ಕೋಟಿ ರೂ., ಬ್ಯಾಂಕ್ ಬಡ್ಡಿ 15 ಕೋಟಿ ರೂ., ಮಾರುಕಟ್ಟೆ, ಇತರ ಬಾಡಿಗೆಯಾಗಿ 5.47 ಕೋಟಿ ರೂ., ರಸ್ತೆ ಕಡಿತ, ಪುನರ್ ನಿರ್ಮಾಣ ಶುಲ್ಕದಿಂದ 3 ಕೋಟಿ ರೂ. ಸೇರಿದಂತೆ ಒಟ್ಟು 337.25 ಕೋಟಿ ರೂ.ಗಳ ಅಂದಾಜು ಆದಾಯವನ್ನು ನಿರೀಕ್ಷಿಸಲಾಗಿದೆ.
ರಾಜ್ಯ ಸರಕಾರದಿಂದ ವೇತನ, ಎಸ್ಎಫ್ಸಿ ಮುಕ್ತ ನಿಧಿ, ಪೌರ ಕಾರ್ಮಿಕರ ನೇರ ಪಾವತಿ ವೇತನ, ಸ್ಟ್ಯಾಂಪ್ ಶುಲ್ಕದ ಸರ್ಚಾರ್ಜ್ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 199.23 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರದಿಂದ ಅಮೃತ್ 2.0 ಜಲ್ ಹಿ ಅಮೃತ್, ನಲ್ಮ್, ಸ್ವಚ್ಛ ಭಾರತ ಮಿಷನ್, 15ನೆ ಹಣಕಾಸು ಮುಕ್ತ ಅನುದಾನ, 16ನೆ ಹಣಕಾಸು, ಎನ್ಜಿಟಿ ಸೇರಿದಂತೆ ಒಟ್ಟು 93.36 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.