ಮಂಜೇಶ್ವರ, ಮಾ. 26 (DaijiworldNews/TA): ಕುತೂಹಲಕ್ಕೆ ಕಾರಣವಾದ ಕಾಸರಗೋಡಿನ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಕೆ. ಎಂ ಅಶ್ರಫ್ ತಮ್ಮ ನಾಮಪತ್ರ ಹಿಂತೆಗೆದುಕೊಂಡರು. ಕೆ. ಎಂ ಅಶ್ರಫ್ ಅವರು ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಹಿಂತೆಗೆದುಕೊಂಡರು.

ಗುರುವಾರ ಬೆಳಗ್ಗೆ ಎಸ್ಡಿಪಿಐ ರಾಜ್ಯ ಅಧ್ಯಕ್ಷ ಲತೀಫ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ರಾಜ್ಯ ಘಟಕದ ಮುಖಂಡರು ನಾಮಪತ್ರ ಹಿಂದಕ್ಕೆ ಪಡೆಯುವಂತೆ ಸಲಹೆ ನೀಡಿದ್ದರು. ಹಲವು ಬೆಳವಣಿಗೆಯ ಬಳಿಕ ಕೊನೆಗೂ ನಾಮಪತ್ರ ಹಿಂತೆಗೆದು ಕೊಂಡಿದ್ದಾರೆ. ಈ ನಡುವೆ ಅತೃಪ್ತಗೊಂಡ ಅಶ್ರಫ್ ಜಿಲ್ಲಾ ಸಮಿತಿ ಸದಸ್ಯ ಹಾಗೂ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಇನ್ನು ಮಂಜೇಶ್ವರದಲ್ಲಿ ಯುಡಿಎಫ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಎಸ್ಡಿಪಿಐ ಸ್ಪರ್ಧಿಸಿದರೆ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ ಆತಂಕವಿತ್ತು. ಈ ಹಿನ್ನೆಲೆಯಲ್ಲಿ ಜಾತ್ಯತೀತ ಮತಗಳ ವಿಭಜನೆ ತಡೆಯಲು ಅಭ್ಯರ್ಥಿಯನ್ನು ಕಣದಿಂದ ಇಳಿಸುವಂತೆ ಎಸ್ಡಿಪಿಐ ಮೇಲೆ ರಾಜಕೀಯ ಒತ್ತಡವಿತ್ತು ಎಂಬ ಮಾತು ಸದ್ಯ ಸ್ಥಳೀಯ ಮಟ್ಟದಲ್ಲಿ ಕೇಳಿಬರುತ್ತಿದೆ ಎನ್ನಲಾಗಿದೆ.