ಕುಂದಾಪುರ, ಮಾ. 26 (DaijiworldNews/AA): ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸಿದ್ದಾಪುರ ಗ್ರಾಮದ ಅಕ್ಕುಂಜೆ ನಿವಾಸಿ ಶಶಿಕಾಂತ್ ಶೆಟ್ಟಿ (44) ಎಂಬಾತನ ಮೇಲಿನ ಆರೋಪಗಳು 10 ವರ್ಷಗಳ ನಂತರ ಸಾಬೀತಾಗಿದ್ದು, ಕುಂದಾಪುರ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣ ದಾಖಲಾದ ನಂತರ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು, ಕುಂದಾಪುರ ಗ್ರಾಮಾಂತರ ಪೊಲೀಸರು ಮಾರ್ಚ್ 1 ರಂದು ಪಶ್ಚಿಮ ಬಂಗಾಳದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಯ ಪತ್ನಿ ನೀಡಿದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೀರ್ಘಕಾಲದ ವಿಚಾರಣೆಯ ನಂತರ ಇದೀಗ ಕೋರ್ಟ್ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.