ಕುಂದಾಪುರ, ಮಾ. 25 (DaijiworldNews/AA): ಬೈಂದೂರು ಮತ್ತು ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸೇತುವೆಯ ತಡೆಗೋಡೆಗೆ ಮಹಾರಾಷ್ಟ್ರ ಮೂಲದ ಗೂಡ್ಸ್ ವಾಹನವೊಂದು ಢಿಕ್ಕಿಯಾಗಿದ್ದು, ಈ ವೇಳೆ ಅವರ ಹಿಂದೆ ಬರುತ್ತಿದ್ದ ಕಾರು ಅದಕ್ಕೆ ಢಿಕ್ಕಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕ, ಪ್ರಯಾಣಿಕರು ಹಾಗೂ ಗೂಡ್ಸ್ ವಾಹನದ ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತೀ ವೇಗದಲ್ಲಿದ್ದ ಗೂಡ್ಸ್ ವಾಹನವು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಅದರ ಹಿಂದೆಯೇ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಗೂಡ್ಸ್ ವಾಹನಕ್ಕೆ ಢಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ತಕ್ಷಣವೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಮತ್ತು ಗೂಡ್ಸ್ ವಾಹನ ಎರಡೂ ಸಂಪೂರ್ಣ ನಜ್ಜುಗುಜ್ಜಾಗಿವೆ. ಘಟನೆ ವೇಳೆ ಕಾರಿನ ಏರ್ಬ್ಯಾಗ್ ತೆರೆದುಕೊಂಡಿದ್ದರಿಂದ ಪ್ರಾಣಹಾನಿ ತಪ್ಪಿದೆ.
ಸಂಚಾರ ದಟ್ಟಣೆ ವೇಳೆ ಅಪಘಾತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕುಂದಾಪುರ ಸಂಚಾರಿ ಠಾಣೆ ಎಸ್ಐ ಅನೂಪ್ ನಾಯಕ್ ಮತ್ತು ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.