ಉಡುಪಿ, ಮಾ. 25 (DaijiworldNews/AA): ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡು ಮೂಲದ ಮೀನುಗಾರರಿದ್ದ ದೋಣಿಯು ಗುದ್ದಿದ ಪರಿಣಾಮ ಸ್ಥಳೀಯ ಮೀನುಗಾರ ದೋಣಿ ಮಗುಚಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಉಡುಪಿಯ ಕಾಪು ಕಡಲ ಕಿನಾರೆಯಲ್ಲಿ ತೀರದಲ್ಲಿ ಸಂಭವಿಸಿದೆ.

ಕಳೆದ ಕೆಲ ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದರು. ಈ ಹಿನ್ನಲೆ ಸ್ಥಳೀಯ ಮೀನುಗಾರರು ಸಣ್ಣ ದೋಣಿಯಲ್ಲಿ ತೆರಳಿ ತಮಿಳುನಾಡು ಮೂಲದ ಮೀನುಗಾರರನ್ನು ಪ್ರಶ್ನಿಸಲು ಸಮುದ್ರಕ್ಕೆ ತೆರಳಿತ್ತು. ಈ ವೇಳೆ ಉಂಟಾದ ಮಾತಿನ ಚಕಮಕಿಯ ನಡುವೆ, ತಮಿಳುನಾಡು ಮೀನುಗಾರರು ಉದ್ದೇಶಪೂರ್ವಕವಾಗಿ ಸ್ಥಳೀಯ ಮೀನುಗಾರರ ಸಣ್ಣ ದೋಣಿಗೆ ಢಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಢಿಕ್ಕಿಯ ರಭಸಕ್ಕೆ ಸ್ಥಳೀಯ ಮೀನುಗಾರರ ಬೋಟ್ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ಈ ವೇಳೆ ಇಬ್ಬರು ಸ್ಥಳಿಯ ಮೀನುಗಾರರು ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದ ಓರ್ವ ಮೀನುಗಾರರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ. ಸದ್ಯ ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯ ಬಳಿಕ ತಮಿಳುನಾಡು ಮೂಲದ ಮೀನುಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನ ಬೋಟ್ಗಳು ಕಳೆದ ಹಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭದ್ರತಾ ಪೊಲೀಸ್ ಮತ್ತು ಸ್ಥಳೀಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.