ಕುಂದಾಪುರ, ಮಾ. 25 (DaijiworldNews/AA): ತಲ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಚ್ 24ರಂದು ನಡೆದ ರಸ್ತೆ ಅಪಘಾತದಲ್ಲಿ ಕುಂದಾಪುರ ತಾಲೂಕು ಗಾಣಿಗ ಸಂಘದ ಮಾಜಿ ಅಧ್ಯಕ್ಷರು ಶ್ರೀನಿವಾಸ ಗಾಣಿಗ (68) ಅವರು ಮೃತಪಟ್ಟಿದ್ದಾರೆ.

ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನದ ಸಕ್ರಿಯ ಕಾರ್ಯಕರ್ತರಾಗಿದ್ದ ಶ್ರೀನಿವಾಸ ಗಾಣಿಗ ಅವರು, ಮಂಗಳವಾರ ರಾತ್ರಿ ಕುಂದಾಪುರದಲ್ಲಿ ಸಭೆಯೊಂದನ್ನು ಮುಗಿಸಿ ತಮ್ಮ ಬೈಕ್ನಲ್ಲಿ ಕಟ್ ಬೆಲ್ತೂರು ಕಡೆಗೆ ಹಿಂತಿರುಗುತ್ತಿದ್ದರು.
ರಾತ್ರಿ 8 ಗಂಟೆಯ ಸುಮಾರಿಗೆ ತಲ್ಲೂರು ಸಮೀಪ ವಿರುದ್ಧ ದಿಕ್ಕಿನಿಂದ ಅತೀ ವೇಗವಾಗಿ ಬಂದ ಬೈಕ್ ಇವರ ಬೈಕ್ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಶ್ರೀನಿವಾಸ ಗಾಣಿಗ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು.
ತಕ್ಷಣವೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.