ಬಂಟ್ವಾಳ, ಮಾ. 25 (DaijiworldNews/TA): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ (ರಿ.) ಬಂಟ್ವಾಳ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಮಾಹಿತಿ ಕಾರ್ಯಗಾರ ಬಿ.ಸಿ.ರೋಡಿನ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ಸಿ.ಡಿ.ಪಿ.ಒ. ಮಮ್ತಾಜ್ ಗಿಡಕ್ಕೆ ನೀರು ಒಯ್ಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸದಸ್ಯರು ಪ್ರೀತಿ ವಿಶ್ವಾಸದಿಂದ ಕಟ್ಟಿದ ಸ್ತ್ರೀ ಶಕ್ತಿ ಗುಂಪು ಮಹಿಳೆಯರ ಬದುಕನ್ನು ಬದಲಿಸಿದೆ. ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಿದಾಗ ಆರ್ಥಿಕವಾಗಿ ಸದೃಡವಾಗಬಲ್ಲರು ಎಂಬ ಉದ್ದೇಶದಿಂದ ಸರಕಾರದಿಂದ ಅನೇಕ ಸ್ವ ಉದ್ಯಮಗಳಿಗೆ ಅವಕಾಶಗಳನ್ನು ಒದಗಿಸುತ್ತಿದೆ.
ಎಲ್ಲವನ್ನು ನಿಯಮಾನುಸಾರ ಪಡೆದುಕೊಂಡು ಸದುಪಯೋಗಪಡಿಸಿಕೊಂಡಾಗ ಯಶಸ್ಸು ನಿಶ್ಚಿತ ಎಂದು ಅವರು ತಿಳಿಸಿದರು. ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದು, ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಜಯಂತಿ ಎಸ್ ಪೂಜಾರಿ, ಕೋಶಾಧಿಕಾರಿ ವಿದ್ಯಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.