ಮಂಗಳೂರು, ಮಾ. 25 (DaijiworldNews/TA): ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಐದು ದಿನಗಳ ಕಾಲ ಆಯೋಜಿಸಿದ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸ್ಲಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಮಂಗಳವಾರ ಚಾಲನೆ ದೊರೆಯಿತು.

ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಾತನಾಡಿ, ಭಾರತದಲ್ಲಿ ಕ್ರಿಕೆಟ್ ಜೊತೆ ಇತರೇ ಕ್ರೀಡೆಗಳು ಕೂಡ ಮುನ್ನೆಲೆಗೆ ಬರುತ್ತಿದೆ. ಪವರ್ಲಿಫ್ಟಿಂಗ್, ಈಜು, ಬ್ಯಾಡ್ಮಿಂಟನ್, ಕಬಡ್ಡಿಯಂತಹ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಪ್ರಸಿದ್ದಿ ಪಡೆಯುತ್ತಿದೆ. ಪ್ರತಿಯೊಬ್ಬರೂ ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸದೃಢತೆಯೂ ಅತೀ ಅಗತ್ಯ. ಸದೃಢರಾಗಬೇಕು ಎನ್ನುವುದು ನಮ್ಮ ಮೂಲ ಮಂತ್ರವಾಗಿರಬೇಕು ಎಂದು ಹೇಳಿದರು. ಪ್ರಾಸ್ತಾವಿಸಿದ ಅಸೋಸಿಯೇಶನ್ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ಮಾತನಾಡಿ, ಈ ಕ್ರೀಡಾಕೂಟಕ್ಕೆ ದೇಶದ ವಿವಿಧ ಭಾಗದ 300ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿದ್ದಾರೆ. ಮಕ್ಕಳಿಗೆ ಮನೆಗಳಲ್ಲಿಯೇ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿಕೊಡಬೇಕು ಎಂದು ತಿಳಿಸಿದರು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯ ಸುಲ್ತಾನ್, ಎಂಆರ್ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಉದ್ಯಮಿಗಳಾದ ರಘು ಶರ್ಮ, ಮುಕುಂದ್ ಕಾಮತ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕ ಆನಂದ್ ಪ್ರಭು, ಝಿಹಾ ಎಚ್.ಎಂ., ಪವರ್ ಲಿಫ್ಟಿಂಗ್ ಇಂಡಿಯ ಕಾರ್ಯದರ್ಶಿ ಪಿ.ಜೆ. ಜೋಸೆಫ್, ಆಸ್ಟ್ರೇಲಿಯ ಪವರ್ ಲಿಫ್ಟಿಂಗ್ ಕೋಚ್ ಗ್ಯಾರಿ ವಿಲಿಯಮ್ಸ್, ಮಾಜಿ ಮೇಯರ್ ಪುರಂದರ ಕೂಳೂರು, ಕೂಟದ ನಿರ್ದೇಶಕ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಚಿ ಜಯರಾಮ ಶೆಟ್ಟಿಗಾರ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕಿ ಡಾ| ಸಾವಿಲ್ ಉಚ್ಚಿಲ್ ಮತ್ತಿತರರು ಇದ್ದರು. ಐದು ದಿನಗಳ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಪವರ್ ಲಿಫ್ಟರ್, 100ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಿದ್ದರು.