ಉಡುಪಿ, ಮಾ. 24 (DaijiworldNews/AK): ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಆದೇಶ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಪ್ರಾಧಿಕಾರದ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಿದ್ದ ಮಾಜಿ ಶಾಸಕ ರಘುಪತಿ ಭಟ್ ಗೆ ಇದೀಗ ಗೆಲುವು ಸಿಕ್ಕಿದೆ.

ರಘುಪತಿ ಭಟ್ ಗೆ ಇದೀಗ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಲೀಗಲ್ ಒಪಿನಿಯನ್ ಪಡೆದು ಏಕ ವಿನ್ಯಾಸ ನಕ್ಷೆ ನೀಡಿದ್ದಾರೆ. ಈ ಮೂಲಕ ಧರಣಿ ಕುಳಿತ ಮಾಜಿ ಶಾಸಕ ರಘುಪತಿ ಭಟ್ ಗೆಲುವು ಸಾಧಿಸಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಘುಪತಿ ಭಟ್, ನಾನು ಧರಣಿ ಕುಳಿತು ನ್ಯಾಯ ಸಿಕ್ಕಿದೆ, ಇದರಿಂದ ಸಂತೋಷವಾಗಿದೆ. ಕಾನೂನು ಬದ್ಧ ಇದ್ದ ಕಾರಣ ನನಗೆ ಅನುಮತಿ ಸಿಕ್ಕಿದೆ. ನಾನು ಯಾರ ಪ್ರಭಾವವನ್ನು ಬಳಸಿಲ್ಲ ಧರಣಿ ಮಾಡಿದ್ದೇನೆ. ಕಾನೂನು ಸಲಹೆಗಾರರಿಂದ ಅಭಿಪ್ರಾಯ ಪಡೆದು ಅನುಮತಿ ಸಿಕ್ಕಿದೆ. ಇನ್ನಾದರೂ ನನ್ನ ಉದ್ಯಮಕ್ಕೆ ಅಡ್ಡಿಪಡಿಸಬೇಡಿ ಎಂದು ತಿಳಿಸಿದರು.