ಕುಂದಾಪುರ, ಮಾ. 19 (DaijiworldNews/AA): ಅರಾಟೆ ಸೇತುವೆಯ ಬಳಿ ಹೊಳೆಯಲ್ಲಿ ಮರುವಾಯಿ (ಮಳಿಚಿಪ್ಪು) ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಹಂಗಳೂರು ನಿವಾಸಿ ಚಂದ್ರ (39) ಎಂದು ಗುರುತಿಸಲಾಗಿದೆ.
ಚಂದ್ರ ಅವರು ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ತಮ್ಮ ಸಂಬಂಧಿಕ ಅಜಿತ್ ಎಂಬವರೊಂದಿಗೆ ಮರುವಾಯಿ ಸಂಗ್ರಹಿಸಲು ಅರಾಟೆ ಸೇತುವೆಯ ಸಮೀಪವಿರುವ ನದಿಗೆ ತೆರಳಿದ್ದರು. ಮರುವಾಯಿ ಹೆಕ್ಕುತ್ತಿದ್ದ ಸಂದರ್ಭದಲ್ಲಿ ಚಂದ್ರ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದನ್ನು ಗಮನಿಸಿದ ಅಜಿತ್ ಕೂಡಲೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಚಂದ್ರ ಅವರ ಸುಳಿವು ಸಿಕ್ಕಿರಲಿಲ್ಲ.
ಬುಧವಾರ ಬೆಳಗ್ಗೆಯೂ ಹುಡುಕಾಟ ಮುಂದುವರಿದಿದ್ದು, ಬೆಳಿಗ್ಗೆ ಸುಮಾರು 9:45ರ ವೇಳೆಗೆ ಅರಾಟೆ ಸೇತುವೆಯ ಸಮೀಪವೇ ಚಂದ್ರ ಅವರ ಮೃತದೇಹ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.