ಬಂಟ್ವಾಳ, ಮಾ. 19 (DaijiworldNews/TA): ಬಿ.ಸಿ.ರೋಡಿನಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿದ್ದ ಘಟನೆ ನಡೆದಿದ್ದು, ಸ್ಥಳೀಯರು ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನ ಪೊಳಲಿ ಕೈಕಂಬ ದ್ವಾರದಿಂದ ಮೊಡಂಕಾಪು ಕಡೆಗೆ ಸಾಗುವ ರಸ್ತೆಯ ಎಡಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದೆ. ಇದರ ಪರಿಣಾಮವಾಗಿ ನೀರು ಕಾರಂಜಿಯಂತೆ ಎತ್ತರಕ್ಕೆ ಚಿಮ್ಮುತ್ತಿದ್ದು, ಬಹಳ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ. ಒಡೆದ ಪೈಪ್ ನಿಂದ ನೀರು ರಸ್ತೆಯ ಮೇಲೆಯೇ ಹರಿದು ಹೋಗುತ್ತಿದ್ದು, ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.
ಬೆಳಿಗ್ಗೆಯೇ ಈ ಘಟನೆ ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇನ್ನೂ ದುರಸ್ತಿ ಕಾರ್ಯ ಆರಂಭವಾಗಿಲ್ಲವೆಂದು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಿ ಪೈಪ್ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.