ಮಂಗಳೂರು, ಮಾ. 19 (DaijiworldNews/AA): ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಬಂದು, ಸೋಮವಾರ ಗುಜರಾತ್ನ ಮುಂದ್ರಾ ಬಂದರನ್ನು ತಲುಪಿದ್ದ ಎಲ್ಪಿಜಿ ಹೊತ್ತ 'ಶಿವಾಲಿಕ್' ಹಡಗು ನವ ಮಂಗಳೂರು ಬಂದರಿಗೆ ಆಗಮಿಸುವುದಿಲ್ಲ.

"ಶಿವಾಲಿಕ್ ಹಡಗಿನಿಂದ ಸುಮಾರು 20,000 ಟನ್ ಎಲ್ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗುತ್ತದೆ. ಉಳಿದ ಸುಮಾರು 26,000 ಟನ್ ಎಲ್ಪಿಜಿಯೊಂದಿಗೆ ಹಡಗು ಬುಧವಾರ ನವ ಮಂಗಳೂರು ಬಂದರಿಗೆ ಬರಲಿದೆ ಎಂಬ ಮಾಹಿತಿಯಿತ್ತು. ಆದರೆ, ಈಗ ಈ ಹಡಗು ಇಲ್ಲಿಗೆ ಬರುತ್ತಿಲ್ಲ" ಎಂದು ನವ ಮಂಗಳೂರು ಬಂದರಿನ ಮೂಲಗಳು ತಿಳಿಸಿವೆ.
ಶಿವಾಲಿಕ್ ಹಡಗಿನಲ್ಲಿದ್ದ ಎಲ್ಪಿಜಿಯ ಒಂದು ಭಾಗವನ್ನು ಈಗಾಗಲೇ ಮುಂದ್ರಾ ಬಂದರಿನಲ್ಲಿ ಇಳಿಸಲಾಗಿತ್ತು. ಉಳಿದ ಭಾಗವನ್ನು ಗುಜರಾತ್ನ ದಹೇಜ್ ಟರ್ಮಿನಲ್ನಲ್ಲಿ ಇಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ, ಎಚ್ಪಿಸಿಎಲ್ಗೆ ಎಲ್ಪಿಜಿ ಪೂರೈಸುವ ಮತ್ತೊಂದು ಹಡಗು ಈ ತಿಂಗಳ 20ರ ನಂತರ ನವ ಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ.
"ನಮ್ಮ ಕಂಪನಿಗೆ ಎಲ್ಪಿಜಿ ಪೂರೈಸುವ ಹಡಗು ಸದ್ಯ ಮಂಗಳೂರಿನತ್ತ ಬರುತ್ತಿದೆ. ಆದರೆ, ಆ ಹಡಗಿನಲ್ಲಿರುವ ಒಟ್ಟು ಸರಕಿನ ಪೈಕಿ ಎಷ್ಟು ಪ್ರಮಾಣದ ಎಲ್ಪಿಜಿಯನ್ನು ಇಲ್ಲಿ ಇಳಿಸಲಾಗುತ್ತದೆ ಎಂಬ ಬಗ್ಗೆ ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ" ಎಂದು ಎಚ್ಪಿಸಿಎಲ್ ಮೂಲಗಳಿಂದ ತಿಳಿದುಬಂದಿದೆ.