ಬೆಳ್ತಂಗಡಿ, ಮಾ. 19 (DaijiworldNews/T A): ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಜಾತ್ರೆ ಸಂದರ್ಭ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮಾರ್ಚ್.11ರಂದು ಸಂಜೆ, ಬಾಲಕನು ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದನು. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಬಂದಿದ್ದಾನೆಂದು ಅಕ್ಷೇಪ ವ್ಯಕ್ತಪಡಿಸಿ, ಬಾಲಕನ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಆರೋಪಿಗಳು ಬಾಲಕನನ್ನು ಬೈಕಿನಲ್ಲಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತಷ್ಟು ಹಲ್ಲೆ ನಡೆಸಿದಷ್ಟೇ ಅಲ್ಲದೆ, ಜಾತ್ರಾ ಸ್ಥಳದಲ್ಲಿ ತಾನೇ ತಪ್ಪು ಮಾಡಿರುವುದಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿ ವಿಡಿಯೋ ದಾಖಲಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ನಂತರ ಬಾಲಕನು ಭಯಭೀತನಾಗಿ ಕೆಲವು ದಿನಗಳಿಂದ ಮಾನಸಿಕ ಒತ್ತಡದಲ್ಲಿದ್ದಾನೆ ಎನ್ನಲಾಗಿದೆ. ಬಳಿಕ, ಬಾಲಕನ ತಂದೆ ದಿನಾಂಕ ಮಾರ್ಚ್ 18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 137(2), 115(2), 351(2), 352, 353(2) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.