ಬಂಟ್ವಾಳ, ಮಾ. 17 (DaijiworldNews/AA): ಉಳ್ಳಾಲದ ಚೇಳೂರು ಎಂಬಲ್ಲಿ ಮನೆಯೊಂದಕ್ಕೆ ಹೋಗುವ ರಸ್ತೆಯ ವಿಚಾರವಾಗಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎರಡೂ ಕಡೆಯವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಮೊದಲ ದೂರು: ರಸ್ತೆ ತಡೆ ಮತ್ತು ಹಲ್ಲೆ ಆರೋಪ
ಉಳ್ಳಾಲ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಅವರು ನೀಡಿದ ದೂರಿನ ಪ್ರಕಾರ, ಅವರ ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ಸ್ಥಳೀಯ ಚರ್ಚ್ ಆಡಳಿತ ಮಂಡಳಿಯೊಂದಿಗೆ ವಿವಾದವಿತ್ತು. ಮಾರ್ಚ್ 14 ರಂದು ಚರ್ಚ್ಗೆ ಸಂಬಂಧಿಸಿದ ವ್ಯಕ್ತಿಗಳು ಜೆಸಿಬಿ ಬಳಸಿ ತನ್ನ ಮನೆಗೆ ಹೋಗದಂತೆ ರಸ್ತೆ ಬಂದ್ ಮಾಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ಈ ವೇಳೆ ರಸ್ತೆ ತೆರವುಗೊಳಿಸುವಂತೆ ದೂರುದಾರರು ಮತ್ತು ಅವರ ಮಕ್ಕಳು ಮನೆಗೆ ಹೋಗಲು ರಸ್ತೆ ಬಿಡಲು ಎಂದು ಕೇಳಿಕೊಂಡಾಗ, ಆರೋಪಿಗಳಾದ ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಹಾಗೂ ಇತರರು ಸೇರಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದು, ಜೊತೆಗೆ ಜೀವಬೆದರಿಕೆ ಹಾಕಿದ್ದಾರ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಡಯಾನಾ ಅವರು ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 37/2026, ಕಲಂ:189(2), 191(2), 115(2), 382, 351(2) r/w 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರತಿ ದೂರು: ಕೆಲಸಕ್ಕೆ ಅಡ್ಡಿ ಮತ್ತು ಹಲ್ಲೆ ಆರೋಪ
ಇದೇ ಘಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರತಿ ದೂರಿನಲ್ಲಿ, ಮಾರ್ಚ್ 14 ರ ಸಂಜೆ ಜೆಸಿಬಿ ಮೂಲಕ ರಸ್ತೆ ಕೆಲಸ ಮಾಡಿಸುತ್ತಿದ್ದಾಗ ಡಯಾನ ಡಿಸೋಜ ರವರು ಕೆಲಸಕ್ಕೆ ತಡೆಯೊಡ್ಡಿ ದೂರುದಾರೆ ಜೆಸಿಂತಾ ಡಿಸೋಜಾ (54) ಅವರಿಗೆ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮತ್ತೋರ್ವ ಆರೋಪಿ ವಿನಿಲ್ ಎಂಬಾತನು ದೂರುದಾರರಿಗೆ ಅವ್ಯಾಚವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ
ಘಟನೆಯಲ್ಲಿ ಗಾಯಗೊಂಡ ಜೆಸಿಂತಾ ಡಿಸೋಜಾ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 38/2026, ಕಲಂ: 352, 115(2), 118(1), 351(2), ಜೊತೆಗೆ 3(5) BNSರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ಯ ದಾಖಲಾದ ಈ ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.