ಬಂಟ್ವಾಳ, ಮಾ. 15 (DaijiworldNews/TA): ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಶನಿವಾರ ಬಂಟ್ವಾಳದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ, ರಮಾನಾಥ ರೈ ಮಾತನಾಡಿ, ಸೌಹಾರ್ದ ಎಂಬ ಪದಕ್ಕೆ ಶಕ್ತಿ ತುಂಬುವುದಕ್ಕೆ ಈ ಕಾರ್ಯಕ್ರಮ ಮಾಡುತ್ತೇವೆ. ಧಾರ್ಮಿಕ ಮುಖಂಡರುಗಳು ನೀಡುವ ಸಂದೇಶದಂತೆ ನಾವು ಇಲ್ಲಿ ಜೀವಿಸಬೇಕು ಎಂಬುದೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು. ಮಾಣಿಲ ಶ್ರೀ ಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಂದೇಶ ನೀಡಿ, ಮಾಜಿ ಸಚಿವರ ಬಿ.ರಮಾನಾಥ ರೈ ಅವರು ಸರ್ವರ ಮನವನ್ನು ಸೆಳೆಯುವ ಮತ್ತು ಐಕ್ಯತೆಯನ್ನು ಮೂಡಿಸುವ ಸಲುವಾಗಿ ಮಾಡಿರುವ ಉತ್ತಮ ಕಾರ್ಯ ಎಂದು ಹೇಳಿದರು. ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ, ಮಾತನಾಡಿ, ಒಂದೇ ತಾಯಿಯ ಮಕ್ಕಳಂತೆ ಜೀವನ ಮಾಡಬೇಕು. ಯಾವುದೇ ಜಾತಿಮತಗಳಿಲ್ಲದೆ ಸೌಹಾರ್ದಯುತವಾಗಿರೋಣ ಎಂದು ತಿಳಿಸಿದರು.
ಮಂಗಳೂರು ಶಾಂತಿ ಪ್ರಕಾಶನದ ಅದ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ ನಿಮ್ಮನ್ನು ನೀವು ನಿಯಂತ್ರಣಿಸುವುದೇ ಉಪವಾಸದ ಮುಖ್ಯ ಉದ್ದೇಶವಾಗಿದೆ. ದ್ವೇಷವನ್ನು ದೂರಮಾಡಿ, ಮನುಷ್ಯತ್ವವನ್ನು ಬೆಳೆಸುವ ಮತ್ತು ಉಳಿಸುವ ಬಹಳ ದೊಡ್ಡ ಕಾರ್ಯವನ್ನು ನಾವು ಮಾಡಬೇಕು ಎಂದು ತಿಳಿಸಿದರು. ಪ್ರಮುಖರಾದ ನೆಹರು ನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ, ಪದ್ಮರಾಜ್, ಯು.ಟಿ.ಇಪ್ತಿಕರ್, ಅಶ್ವನಿ ಕುಮಾರ್ ರೈ, ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್ ರೊಡ್ರಿಗಸ್, ಬೇಬಿಕುಂದರ್, ಅಬ್ಬಾಸ್ ಆಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.