ಉಡುಪಿ, ಮಾ. 13 (DaijiworldNews/AA): ಕರ್ನಾಟಕದಾದ್ಯಂತ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಕೈಗೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (ಡಿಸಿ) ಶ್ರೀನಿವಾಸ್ ಟಿ.ಎಂ. ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ 8.69 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.







ಮಾರ್ಚ್ 11 ರಿಂದ 12 ರವರೆಗೆ ಎರಡು ದಿನಗಳ ಕಾಲ ನಡೆದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಶ್ರೀನಿವಾಸ್ ಅವರಿಗೆ ಸೇರಿದ ಒಟ್ಟು 15 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿದ್ದಾರೆ.
ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ 11 ನಿವೇಶನಗಳು, ಆರು ವಸತಿ ಮನೆಗಳು ಮತ್ತು 31 ಎಕರೆ ಕೃಷಿ ಭೂಮಿ ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 6,90,64,716 ರೂ. ಎಂದು ಅಂದಾಜಿಸಲಾಗಿದೆ.
ಶೋಧದ ವೇಳೆ 3,95,941 ರೂ. ನಗದು, 1,47,50,506 ರೂ. ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, 25,75,000 ರೂ. ಬ್ಯಾಂಕ್ ಠೇವಣಿ ಹಾಗೂ 72,68,554 ರೂ. ಮೌಲ್ಯದ ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.
ಈ ಕಾರ್ಯಾಚರಣೆ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಎಸ್ಪಿ) ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.