ಬೆಳ್ತಂಗಡಿ, ಮಾ. 13 (DaijiworldNews/AA): ಕೆಎಸ್ಆರ್ಟಿಸಿ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಬೆಳ್ತಂಗಡಿಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಡಿ ಘಾಟಿನ ಗುಂಡ್ಯ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.



ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ, ಶ್ರೀಧರ್ ಮರಕಡ, ಜನಾರ್ದನ ಕೆರಿಮಾರ್ ಸಾವನ್ನಪ್ಪಿದ್ದು ಸುರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಪರಸ್ಪರ ಸಂಬಂಧಿಕರು ಎಂದು ತಿಳಿದುಬಂದಿದೆ.
ಸಕಲೇಶಪುರದಲ್ಲಿ ಮದುವೆಗೆ ಹೋಗಿ ಕೊಕ್ಕಡಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಮಧ್ಯಾಹ್ನ 2.30ಕ್ಕೆ ಹೊರಟು ಬೆಂಗಳೂರು ಮೂಲಕ ತಿರುಪತಿ ಹೊರಟಿರುವ ರಾಜಹಂಸ ಬಸ್ ಹಾಗೂ ಕಾರಿನ ಮಧ್ಯೆ ಗುಂಡ್ಯದ ಗಡಿ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ರಕ್ತಸಿಕ್ತವಾಗಿದ್ದವರನ್ನು ಸ್ಥಳೀಯರ ನೆರವಿನೊಂದಿಗೆ ಹೊರತೆಗೆದಿದ್ದಾರೆ.
ಅಪಘಾತಕ್ಕೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.