ಉಡುಪಿ, ಮಾ. 13 (DaijiworldNews/AA): ಉಡುಪಿ ಜಿಲ್ಲೆಯಲ್ಲಿ ಎಲ್ಪಿಜಿ ಪೂರೈಕೆ ಸಮಸ್ಯೆಯನ್ನು ಒಂದು ದಿನದೊಳಗೆ ಬಗೆಹರಿಸದಿದ್ದರೆ ಜಿಲ್ಲೆಯಾದ್ಯಂತ ಹೋಟೆಲ್ಗಳನ್ನು ಬಂದ್ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.






ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮ ಕರಾವಳಿ ಭಾಗದ ಮೇಲೆ ಬೀರಲು ಆರಂಭಿಸಿದ್ದು, ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ.
ಈ ಹಿನ್ನೆಲೆಯಲ್ಲಿ ಉಡುಪಿಯ ಡಯಾನಾ ಹೋಟೆಲ್ನಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಉದ್ಯಮಿಗಳು ಎದುರಿಸುತ್ತಿರುವ ತೀವ್ರ ಸಂಕಷ್ಟಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ತಕ್ಷಣವೇ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು, "ಮಧ್ಯಪ್ರಾಚ್ಯ ಯುದ್ಧದಿಂದಾಗಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಪ್ರಧಾನಿ ಮತ್ತು ಪೆಟ್ರೋಲಿಯಂ ಸಚಿವರು ಒಂದು ವಾರದೊಳಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಎಲ್ಲರೂ ಸಹಕರಿಸಬೇಕು" ಎಂದು ಮನವಿ ಮಾಡಿದರು.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, "ಕೇವಲ 25 ಪ್ರತಿಶತ ಎಲ್ಪಿಜಿ ಪೂರೈಕೆ ಮಾಡುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ದಿನಕ್ಕೆ ಕನಿಷ್ಠ 3 ಸಿಲಿಂಡರ್ ಬೇಕಾದ ಹೋಟೆಲ್ಗಳು ಶೇ. 25 ಪೂರೈಕೆಯಲ್ಲಿ ಹೇಗೆ ನಡೆಸಲು ಸಾಧ್ಯ? ಕನಿಷ್ಠ ಶೇ. 50 ರಷ್ಟು ಪೂರೈಕೆಯಾದರೂ ಮೆನು ಕಡಿತಗೊಳಿಸಿ ಮ್ಯಾನೇಜ್ ಮಾಡಬಹುದು. ಕಳೆದ ಮೂರು ದಿನಗಳಿಂದ ಒಂದೇ ಒಂದು ಸಿಲಿಂಡರ್ ಬಂದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ಮತ್ತು ಆಸ್ಪತ್ರೆಗಳಿಗೆ ಜಿಲ್ಲಾಡಳಿತ ಆದ್ಯತೆ ನೀಡುತ್ತಿದೆ. ಆದರೆ ಸಾವಿರಾರು ಕಾರ್ಮಿಕರು ನಂಬಿಕೊಂಡಿರುವ ಹೋಟೆಲ್ ಉದ್ಯಮವನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದು ವೇಳೆ ಪರಿಹಾರ ಸಿಗದಿದ್ದರೆ ಜಿಲ್ಲೆಯ ಎಲ್ಲ ಹೋಟೆಲ್ಗಳನ್ನು ಮುಚ್ಚಲಾಗುತ್ತದೆ. ನಮಗೆ ಗ್ಯಾಸ್ ಪೂರೈಕೆ ಮಾಡದಿದ್ದರೆ ಹೋಟೆಲ್ ನಡೆಸಲು ಸಾಧ್ಯವೇ ಇಲ್ಲ. ಜಿಲ್ಲಾಡಳಿತಕ್ಕೆ ನಾಳೆಯವರೆಗೆ ಕಾಲಾವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ಬಂದ್ ಮಾಡುವುದು ಅನಿವಾರ್ಯ" ಎಂದು ಎಚ್ಚರಿಸಿದರು.
ಪುತ್ರನ್ ಗ್ಯಾಸ್ ಸಂಸ್ಥೆಯ ದಿನೇಶ್ ಪುತ್ರನ್ ಮಾತನಾಡಿ, "ಮೊದಲು 90 ದಿನಗಳ ಸ್ಟಾಕ್ ಇದೆ ಎಂದು ಅಧಿಕಾರಿಗಳು ಹೇಳಿದ್ದರು, ಆದರೆ ಸೋಮವಾರದಿಂದ ಹಠಾತ್ತನೆ ಪೂರೈಕೆ ಸ್ಥಗಿತಗೊಂಡಿದೆ. ಈಗ ಇಂದಿರಾ ಕ್ಯಾಂಟೀನ್, ಶಾಲೆ ಮತ್ತು ಆಸ್ಪತ್ರೆಗಳಿಗೆ ಆದ್ಯತೆ ನೀಡುವಂತೆ ಸೂಚನೆ ಬಂದಿದೆ" ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಾಗೇಶ್ ಭಟ್, ಲಕ್ಷ್ಮಣ್ ನಾಯಕ್, ವಿಠ್ಠಲ್ ಪೈ ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು. ಸಂಸದರಿಗೆ ತಮ್ಮ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಲಾಯಿತು.