ಮಂಗಳೂರು, ಮಾ. 11 (DaijiworldNews/AA): ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುತ್ತಾರು ಸಮೀಪದ ಮದನಿ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ.

ಮೃತರನ್ನು ಮುಂಡೋಳಿ ನಿವಾಸಿ, ಪ್ರಗತಿಪರ ಕೃಷಿಕ ದಿನೇಶ್ ಗಟ್ಟಿ (50) ಎಂದು ಗುರುತಿಸಲಾಗಿದೆ.
ದಿನೇಶ್ ಅವರು ಮದನಿ ನಗರದ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ, ಅತೀ ವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ನೇರವಾಗಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ದಿನೇಶ್ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.