ಉಡುಪಿ, ಮಾ. 02 (DaijiworldNews/AA): ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತವು ಸಹಾಯವಾಣಿ ಆರಂಭಿಸಿದೆ.

ಇರಾನ್, ಇಸ್ರೇಲ್, ಲೆಬನಾನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಒಟ್ಟು 11 ದೇಶಗಳ ವಾಯುಮಾರ್ಗಗಳನ್ನು ಮಾರ್ಚ್ 2ರವರೆಗೆ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ದುಬೈ ಸೇರಿದಂತೆ ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿ ಕರ್ನಾಟಕದ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಗಳು ನೀಡುವ ಸೂಚನೆಗಳನ್ನು ಜಿಲ್ಲಾಡಳಿತವು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಉಡುಪಿ ಜಿಲ್ಲೆಯ ನಿವಾಸಿಗಳು ಅಥವಾ ಅವರ ಸಂಬಂಧಿಕರು ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ ಉಡುಪಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ: 0820-2574802 / ಉಚಿತ ಸಹಾಯವಾಣಿ: 1077 ಅಥವಾ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ: 080-22340676, 080-22253707 / ಉಚಿತ ಸಹಾಯವಾಣಿ: 1070 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಮಧ್ಯಪ್ರಾಚ್ಯ ದೇಶಗಳಲ್ಲಿರುವ ಉಡುಪಿ ಜಿಲ್ಲೆ ಸೇರಿದಂತೆ ಕರ್ನಾಟಕದ ನಿವಾಸಿಗಳು ಆಯಾ ದೇಶದ ಸ್ಥಳೀಯ ಸರ್ಕಾರಗಳು ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಸಂಕಷ್ಟದಲ್ಲಿರುವವರು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿಯನ್ನು ಸಂಪರ್ಕಿಸಬಹುದು ಅಥವಾ "ಸಾರಥಿ ಸಹಾಯತಾ" ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು. ವೀಸಾ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಹತ್ತಿರದ ಎಫ್ಆರ್ಆರ್ಒ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.