ಮಂಗಳೂರು, ಫೆ. 26 (DaijiworldNews/AA): ಮುಂಬೈ ಸಿಸಿಬಿ ಪೊಲೀಸ್ ಹೆಸರು ಹೇಳಿಕೊಂಡು ಆರೋಪಿಯೋರ್ವ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 41.85 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.31ರಂದು ಅಪರಿಚಿತ ವ್ಯಕ್ತಿ ದೆಹಲಿಯಿಂದ ಕರೆ ಮಾಡಿ ತನ್ನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡು ನಿಮ್ಮ ಗುರುತಿನ ಚೀಟಿ ಉಪಯೋಗಿಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯಲಾಗಿದೆ. ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ. ಗುರುತಿನ ಚೀಟಿಯ ನಂಬರ್ ಉಪಯೋಗಿಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ. ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ನಿಮ್ಮನ್ನು ಬಂಧಿಸಲಾಗುವುದು. ಬಂಧನಕ್ಕೆ ಸುಪ್ರಿಂ ಕೋರ್ಟ್ ವಾರೆಂಟ್ ಇದೆ ಎಂದು ಹೇಳಿ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಕಾಲ್ನಲ್ಲಿದ್ದು ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಬಂಧಿಸಲಾಗುವುದು. ಜೊತೆಗೆ ಈ ವಿಷಯವನ್ನು ಮಗ ಮತ್ತು ಸೊಸೆಗೆ ತಿಳಿಸಬಾರದು ಎಂದು ಆರೋಪಿಯು ದೂರುದಾರರಿಗೆ ಬೆದರಿಸಿದ್ದಾನೆ.
ಬಳಿಕ ದೂರುದಾರರ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ನ ವಿವರಗಳನ್ನು ಪಡೆದುಕೊಂಡಿದ್ದ. ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು. ಬ್ಯಾಂಕ್ ಖಾತೆಯಲ್ಲಿರುವ ಹಣದ ಪರಿಶೀಲನೆ ಮುಗಿಯುವವರೆಗೂ ಅದನ್ನು ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ದೂರುದಾರರು ಆರೋಪಿಯು ನೀಡಿದ ಬ್ಯಾಂಕ್ ಖಾತೆಗಳಿಗೆ ಫೆ.9ರಿಂದ ಫೆ.18ರವರೆಗೆ 41.85 ಲಕ್ಷ ರೂ. ವರ್ಗಾಯಿಸಿರುವುದಾಗಿ ಡಿಜಿಟಲ್ ಅರೆಸ್ಟ್ ಗೊಳಗಾಗಿದ್ದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.