ಮಂಗಳೂರು, ಫೆ. 25 (DaijiworldNews/AA): ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಸುದೀರ್ಘ 17 ವರ್ಷಗಳ ಕಾಲ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ, ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ರಾಜೇಶ್ ಪಿ. ಅವರಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

ರಾಜೇಶ್ ಪಿ. ಅವರು 2008ರಲ್ಲಿ ಅಗ್ನಿಶಾಮಕ ಸಿಬ್ಬಂದಿಯಾಗಿ ಇಲಾಖೆಗೆ ಸೇರ್ಪಡೆಗೊಂಡರು. ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಕೆ.ಎಸ್.ಆರ್.ಪಿ 8ನೇ ಬೆಟಾಲಿಯನ್ ಕ್ಯಾಂಪ್ನಲ್ಲಿ ತಮ್ಮ ತರಬೇತಿಯನ್ನು ಪೂರೈಸಿದ ಇವರು, ಮೊದಲಿಗೆ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಆರಂಭಿಸಿದರು. ನಂತರ ಕದ್ರಿ ಅಗ್ನಿಶಾಮಕ ಠಾಣೆಗೆ ವರ್ಗಾವಣೆಗೊಂಡು ಅಲ್ಲಿಯೂ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು.
ರಾಜೇಶ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ, ೨೦೨೫ರಲ್ಲಿ ಅವರಿಗೆ 'ಲೀಡಿಂಗ್ ಫೈರ್ಮ್ಯಾನ್' ಆಗಿ ಪದೋನ್ನತಿ ನೀಡಲಾಯಿತು. ಸದ್ಯ ಅವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ಈ ಹಿಂದೆ ಇಲಾಖೆಯ ವತಿಯಿಂದ 12,000 ರೂ. ನಗದು ಪುರಸ್ಕಾರವನ್ನೂ ನೀಡಲಾಗಿತ್ತು. ಇದೀಗ 2025ನೇ ಸಾಲಿನ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 'ಮುಖ್ಯಮಂತ್ರಿ ಪದಕ'ಕ್ಕೆ ಇವರು ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಗ್ನಿ ಅವಘಡಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವ ಇವರ ನಿಸ್ವಾರ್ಥ ಸೇವೆಗಾಗಿ ಗೌರವಿಸಲಾಗಿದೆ.