ದ.ಕ/ಉಡುಪಿ, ಫೆ. 24 (DaijiworldNews/TA): ಎರಡು ಜಿಲ್ಲೆಯಲ್ಲಿ 6 ವರ್ಷದಲ್ಲಿ 439 ಮಂದಿಯಲ್ಲಿ ಕುಷ್ಠ ರೋಗ ಪತ್ತೆಯಾಗಿದ್ದು, ಇದರಲ್ಲಿ 363 ಪ್ರಕರಣಗಳು ಮಲ್ಟಿಬ್ಯಾಸಿಲ್ಲರಿ (ಎರಡನೇ ಹಂತ) ಹಂತದ್ದಾಗಿದೆ.

ಕುಷ್ಠ ರೋಗದಲ್ಲಿ ಮೂರು ಹಂತಗಳಿವೆ. 1ರಿಂದ 5 ಮಚ್ಚೆಗಳು ಹಾಗೂ ಒಂದು ನರಕ್ಕೆ ಸೋಂಕು ತಗಲಿದರೆ ಅದು ಪಾಸಿಬ್ಯಾಸಿಲ್ಲರಿ (ಪ್ರಥಮ ಹಂತ) ಕುಷ್ಠ ರೋಗ ಆಗಿರುತ್ತದೆ. 6ಕ್ಕೂ ಹೆಚ್ಚು ಮಚ್ಚೆ ಕಲೆಗಳಿದ್ದು, ಒಂದಕ್ಕಿಂತ ಹೆಚ್ಚು ನರಗಳಿಗೆ ಸೋಂಕು ತಗಲಿದ್ದಲ್ಲಿ ಅದು ಮಲ್ಟಿಬ್ಯಾಸಿಲ್ಲರಿ (ಎರಡನೇ ಹಂತ) ಪ್ರಕರಣ ಆಗಿರುತ್ತದೆ. ಕರಾವಳಿ ಭಾಗದಲ್ಲಿ ಈ ರೀತಿಯ ಪ್ರಕರಣವೇ ಹೆಚ್ಚು ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ 295 ಒಟ್ಟು ಪ್ರಕರಣದಲ್ಲಿ 264, ಉಡುಪಿ ಜಿಲ್ಲೆಯಲ್ಲಿ 144 ಒಟ್ಟು ಪ್ರಕರಣದಲ್ಲಿ 99 ಪ್ರಕರಣಗಳು ಎರಡನೇ ಹಂತದ್ದಾಗಿದೆ. ದೇಹದಲ್ಲಿ ಬಿಳಿ, ತಾಮ್ರ ಬಣ್ಣದ ಮಚ್ಚೆಗಳು ಕಾಣಿಸಿಕೊಂಡಿದ್ದರೂ ಆಗ ಮಾಡುವ ನಿರ್ಲಕ್ಷದಿಂದಾಗಿ ರೋಗ ಇನ್ನಷ್ಟು ಗಂಭೀರ ಸ್ಥಿತಿಗೆ ಕಾರಣವಾಗುತ್ತಿದೆ.