ದಕ್ಷಿಣ ಕನ್ನಡ, ಫೆ. 19 (DaijiworldNews/TA): ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಸಂಜೆ ವೇಳೆಗೆ ಅಕಾಲಿಕ ಮಳೆ ಸುರಿದಿದೆ. ಜಿಲ್ಲೆಯ ಸುಳ್ಯ, ಪುತ್ತೂರು ಸುತ್ತಮುತ್ತಲಿನ ಭಾಗದಲ್ಲಿ ನಿನ್ನೆ ಸಂಜೆ ಮಳೆಯಾಗಿದೆ. ಸಂಪಾಜೆ, ಕಬಕ, ವಿಟ್ಲ, ಬೆಟ್ಟಂಪಾಡಿ, ರೆಂಜ, ನಿಡ್ಪಳ್ಳಿ, ಕೊಂದಲಕಾನ ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ.

ಅನೇಕ ಕೃಷಿಕರ ಮನೆಯಂಗಳದಲ್ಲಿ ಕೊಯಿಲಿನ ಅಡಿಕೆ ಇದ್ದು, ಮಳೆಗೆ ಒದ್ದೆಯಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಬೆಳಗ್ಗೆ ತುಸು ಚಳಿ, ಮೋಡದಿಂದ ಕೂಡಿದ ವಾತಾವರಣ, ಮಧ್ಯಾಹ್ನ ವೇಳೆ ಸೆಕೆಯಿಂದ ಕೂಡಿದೆ. ಬಿಸಿಲಿನ ಬೇಗೆಯೂ ಏರಿಕೆ ಕಾಣುತ್ತಿದ್ದು, ತಾಪಮಾನದಲ್ಲಿಯೂ ಏರಿಳಿತ ಉಂಟಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ಇನ್ನು ವಿಟ್ಲ ಸುತ್ತಮುತ್ತ ಬುಧವಾರ ಮಧ್ಯಾಹ್ನ ಹತ್ತು ನಿಮಿಷ ಉತ್ತಮ ಮಳೆ ಸುರಿದಿದೆ. ವಿಟ್ಲ ಪೇಟೆ, ಉಕ್ಕುಡ, ಪುಣಚ, ಬುಳೇರಿಕಟ್ಟೆ ಮತ್ತಿತರ ಕಡೆಗಳಲ್ಲಿ ಮಳೆ ಬಂದಿತ್ತು.