ಉಡುಪಿ, ಫೆ. 18 (DaijiworldNews/AA): ಕೇವಲ ಒಂದು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ಹೊಸ ಸ್ಕೂಟರ್ ವೊಂದು ಮನೆಯಂಗಳದಲ್ಲಿ ನಿಲ್ಲಿಸಿದ್ದ ಸಂದರ್ಭದಲ್ಲಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶಿರ್ವ ಸಮೀಪದ ಪಂಜಿಮಾರು ಪಾಲಮೆಯಲ್ಲಿ ಮಂಗಳವಾರ ನಡೆದಿದೆ.


ಪಾಲಮೆಯ ನಿವಾಸಿಯೊಬ್ಬರು ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಈ ಸ್ಕೂಟರ್ ಖರೀದಿಸಿದ್ದರು. ಈ ಬಗ್ಗೆ ಮಾತನಾಡಿದ ಸ್ಕೂಟರ್ ಮಾಲೀಕರು, "ನಾನು ಸ್ಕೂಟರ್ ಅನ್ನು ಕೇವಲ ಒಂದು ತಿಂಗಳ ಹಿಂದೆಯಷ್ಟೇ ಖರೀದಿಸಿ ಮನಗೆ ತಂದಿದ್ದೆ. ಮಧ್ಯಾಹ್ನ ಅಂಗಳದಲ್ಲಿ ಪಾರ್ಕ್ ಮಾಡಿದ್ದೆ, ಅಷ್ಟರಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಕೆಲವೇ ಸೆಕೆಂಡುಗಳಲ್ಲಿ ಗಾಡಿ ಸಂಪೂರ್ಣ ಸುಟ್ಟು ಕರಕಲಾಯಿತು" ಎಂದು ತಿಳಿಸಿದ್ದಾರೆ.
ಶಿರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಟ್ಟ ವಾಹನದ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಅಪಾಯವುಂಟಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಶಿರ್ವ ಪರಿಸರದಲ್ಲಿ ಒಂದೇ ವಾರದ ಅಂತರದಲ್ಲಿ ನಡೆದ ಎರಡನೇ ವಾಹನ ಅಗ್ನಿ ಅವಘಡ ಇದಾಗಿದೆ. ಫೆಬ್ರವರಿ 9 ರಂದು ಮಂಗಳೂರಿನಿಂದ ಶಿರ್ವಕ್ಕೆ ಪ್ರಯಾಣಿಸುತ್ತಿದ್ದ ಮಾರುತಿ ಡಿಸೈರ್ ಕಾರು ರಸ್ತೆ ಮಧ್ಯೆ ಬೆಂಕಿಗಾಹುತಿಯಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
"ಬೆಂಕಿಗೆ ಆಕಸ್ಮಿಕ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ವಾಹನ ಮಾಲೀಕರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಸ್ಥಳೀಯ ನಿವಾಸಿಗಳಲ್ಲಿ ವಾಹನ ಸುರಕ್ಷತೆಯ ಬಗ್ಗೆ ಆತಂಕ ಮನೆಮಾಡಿದೆ.